ಶನಿವಾರಸಂತೆ, ಅ. 18: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯನ್ನು ಪಂಚಾಯಿತಿ ಆವರಣದಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಸುಂದರ್ ವಹಿಸಿದ್ದರು.

ಗ್ರಾಮಸಭೆಯಲ್ಲಿ ವಸತಿ ರಹಿತ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ ಕುರಿತು ಚರ್ಚೆ ನಡೆದು ಸುಮಾರು 319 ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸಭೆಗೆ ಮಂಡಿಸಿದರು.

ಕಾಮಗಾರಿಗಳ ಬಗ್ಗೆ ದನದ ಕೊಟ್ಟಿಗೆ, ಕೆರೆ ಏರಿ, ಕೆರೆಯ ಹೂಳೆತ್ತುವಿಕೆಗೆ ಸಾರ್ವಜನಿಕರು ಅರ್ಜಿಗಳನ್ನು ನೀಡಿದರು. ಖ್ಯಾತೆ ಗ್ರಾಮದ ನವಗ್ರಾಮ ಯೋಜನೆ ಸುಮಾರು 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಕೂಡಲೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಖ್ಯಾತೆ ಗ್ರಾಮದ ಪ್ರಮುಖ ವಸಂತ (ವಾಸು) ಆಗ್ರಹಿಸಿದರು.

ನೋಡೆಲ್ ಅಧಿಕಾರಿ ಕೊಡ್ಲಿಪೇಟೆ ಸಹಾಯಕ ಕೃಷಿ ಅಧಿಕಾರಿ ಕವಿತ ಮಾತನಾಡಿ, ತೋಟಗಾರಿಕೆಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು. ಸಭೆಯಲ್ಲಿ ಗ್ರಾಮಸ್ಥರಾದ ಗಣೇಶ್, ಲೋಕೇಶ್, ವಾಸು, ಅಬ್ಬಾಸ್, ಮೋಕ್ಷಿತ್ ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು.