ನಾಪೋಕ್ಲು, ಅ. 18: ಅನಾರೋಗ್ಯಕ್ಕೆ ಒಳಗಾದ ಅಸಹಾಯಕ ಕೂಲಿ ಕಾರ್ಮಿಕನನ್ನು ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಗ್ರಾಮಪಂಚಾಯಿತಿ ಮುಂದಾಗಿದೆ. ಕೂಲಿ ಕಾರ್ಮಿಕ ಜೋಸ್ ಎಂಬಾತ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಕಾಯಿಲೆ ಉಲ್ಬಣಗೊಂಡು ಕಾಲುಗಳಲ್ಲಿ ಗಾಯವಾಗಿ ಚಿಂತಾಜನಕ ಸ್ಥಿತಿ ತಲುಪಿದ್ದ. ಈತನ ಬಗ್ಗೆ ಯಾರೂ ಗಮನ ಹರಿಸದಿದ್ದು, ಎರಡು ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯ ಮಹಮದ್ ಖುರೇಶಿ ಹಾಗೂ ಇತರರು ಜೋಸ್‍ನನ್ನು ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಎಚ್ಚೆತ್ತುಕೊಂಡ ಗ್ರಾಮಪಂಚಾಯಿತಿ ಜೋಸ್ ನನ್ನು ಆ್ಯಂಬ್ಯುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಪಿಡಿಒ ಕೇಶವ ಹಾಗೂ ಸಿಬ್ಬಂದಿ ಬೊಪ್ಪಂಡ ವೇಣು, ಬಾಲು ಇದ್ದರು.
ಜೋಸ್‍ಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಮೈಸೂರು ಅಥವಾ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುವದು ಎಂದು ಪಂಚಾಯಿತಿ ಉಪಾಧ್ಯಕ್ಷ ಸಾಬ ತಿಮ್ಮಯ್ಯ ತಿಳಿಸಿದ್ದಾರೆ.