ಸೋಮವಾರಪೇಟೆ, ಅ. 17: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾಧಿಕಾರಿ ಪಿ.ಎಸ್.ಮಹೇಶ್ ಪಂಚಾಯಿತಿಯಲ್ಲಿ ನಾಮಪತ್ರ ಪರಿಶೀಲಿಸಿದರು.

ಪಂಚಾಯಿತಿಯ 11ವಾರ್ಡ್‍ಗಳಿಗೆ ಸಲ್ಲಿಕೆಯಾಗಿದ್ದ 29 ನಾಮಪತ್ರಗಳ ಪೈಕಿ 1ನೇ ವಾರ್ಡ್‍ನಿಂದ ಬಿ.ಪಿ.ಶಿವಕುಮಾರ್ ಸಲ್ಲಿಸಿದ್ದ ನಾಮಪತ್ರ ತಾಂತ್ರಿಕ ದೋಷದಿಂದ ತಿರಸ್ಕøತವಾಗಿದ್ದು, 28 ನಾಮಪತ್ರಗಳು ಕ್ರಮಬದ್ಧವಾಗಿವೆ.

ಅಭ್ಯರ್ಥಿ ಒಬ್ಬ ಎರಡು ಕಡೆ ಹೆಸರು: ವಾರ್ಡ್ ನಂ 1ರಿಂದ ಬಿಜೆಪಿ ಅಭ್ಯರ್ಥಿ ಕೆ.ಜಿ.ಸುರೇಶ್‍ರವರ ಹೆಸರು, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮ ವಿಭಾಗ ಸಂಖ್ಯೆ 83ರಲ್ಲಿ ಹಾಗು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ. 1ರ ಬಸವೇಶ್ವರ ರಸ್ತೆಯಲ್ಲೂ ಸೇರಿಸಿದ್ದು, ಸುರೇಶ್ ಹೆಸರು ಎರಡು ಮತದಾರರ ಪಟ್ಟಿಯಲ್ಲಿರುವದರಿಂದ ನಾಮಪತ್ರ ತಿರಸ್ಕರಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಉದಯ್ ಶಂಕರ್ ಲಿಖಿತ ಆಕ್ಷೇಪ ಸಲ್ಲಿಸಿದರು. ಈ ಸಂದರ್ಭ ಇವರ ಪರವಾಗಿ ವಕೀಲ ಯತೀಶ್, ಪಂಚಾಯತ್ ರಾಜ್ ಹಾಗೂ ಜನಪ್ರತಿನಿಧಿ ಕಾಯ್ದೆ ಅನ್ವಯ ಒಬ್ಬ ವ್ಯಕ್ತಿ 2 ಕ್ಷೇತ್ರಗಳಲ್ಲಿ ಮತದಾರನಾಗಿರಕೂಡದು, ಈ ಕಾರಣದಿಂದ ಕೆ.ಜಿ.ಸುರೇಶ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ವಾದ ಮಂಡಿಸಿದರು.

2 ಕ್ಷೇತ್ರಗಳಲ್ಲಿ ಹೆಸರಿದೆ ಎಂದು ಒಂದು ತಿಂಗಳ ಹಿಂದೆಯೇ ಬೇಳೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ಕೈಬಿಡಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ 2 ಕಡೆಯ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದ ಕಾರಣದಿಂದ ನಾಮಪತ್ರ ತಿರಸ್ಕರಿಸುವಂತಹ ಯಾವದೇ ಕಾನೂನು ಇಲ್ಲ ಎಂದು ಎಂ.ಬಿ.ಅಭಿಮನ್ಯು ಕುಮಾರ್ ಬಿಜೆಪಿ ಪರವಾಗಿ ವಾದಿಸಿದರು. ಎರಡೂ ಕಡೆಯ ವಾದ ಆಲಿಸಿದ ಚುನಾವಣಾಧಿಕಾರಿ ಆಕ್ಷೇಪಗಳಿದ್ದರೆ ಮೇಲ್ಮಟ್ಟದಲ್ಲಿ ಪರಿಹರಿಸಿಕೊಳ್ಳಿ, ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಿದರು. ಆಕ್ಷೇಪಣೆ ಸಲ್ಲಿಸಿರುವ ಬಗ್ಗೆ ಹಿಂಬರಹ ಪಡೆದ ಕಾಂಗ್ರೆಸ್ ಅಭ್ಯರ್ಥಿ ಉದಯಶಂಕರ್ ನ್ಯಾಯಾಲಯದ ಮೊರೆ ಹೋಗುವದಾಗಿ ಹೇಳಿದರು.