ಕೂಡಿಗೆ, ಅ. 17: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿಯ ಸನ್ನಿಧಿಯಲ್ಲಿ ನವರಾತ್ರಿ ಪೂಜೆಗಳು ಪ್ರಾರಂಭವಾಗಿದ್ದು, ಪ್ರತಿ ದಿನವು ಶ್ರೀ ಲಲಿತಾ ಸಹಸ್ರನಾಮ ಪಾರಾಯಣದೊಂದಿಗೆ ಕುಂಕುಮಾರ್ಚನೆ ನಡೆಸಲಾಗುತ್ತಿದೆ. ನಿನ್ನೆ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ ತದನಂದರ ಶ್ರೀ ಚಂಡಿಕಾ ಹೋಮ-ಹವನಗಳು ಕೇರಳದ ಡಾ.ಶ್ರೀನಾಥ್ ಕರಿಯಾಟ್ ರವರ ನೇತೃತ್ವದಲ್ಲಿ ನೆರವೇರಿದವು. ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು, ಕುಶಾಲನಗರ ಹಾಗೂ ಹುದುಗೂರು ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ.ಚಾಮಿ, ಕಾರ್ಯದರ್ಶಿ ಬಿ.ಎಲ್.ಸುರೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.