ವೀರಾಜಪೇಟೆ, ಅ. 17: ಪೊನ್ನಂಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇಲ್ಲಿನ ಚಿಕ್ಕಪೇಟೆ, ಶಿವಕೇರಿ ಕೇಂದ್ರಗಳ ಆಶ್ರಯದಲ್ಲಿ ಪೋಷಣಾ ಅಭಿಯಾನ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕಿ ಕಾವೇರಮ್ಮ ಮಾತನಾಡಿ, ರಾಜ್ಯ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಮಾತೃವಂದನಾ, ಮಾತೃಪೂರ್ಣ ಹಾಗೂ ಪೋಷಣಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಸಮಾಜ ಸೇವಕಿ ಗಾಯಿತ್ರಿ ನರಸಿಂಹ ಮಾತನಾಡಿ ಗರ್ಭಿಣಿಯರು, ತಾಯಂದಿರು ಯಾವ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಹಾಗೂ ಸರಕಾರದಿಂದ ಈ ಯೋಜನೆಗೆ ಬಂದಿರುವ ಸೌಲಭ್ಯಗಳ ಕುರಿತು ವಿವರಿಸಿದರು. ಅತಿಥಿಗಳಾಗಿ ಆಶಾ ಸುಬ್ಬಯ್ಯ, ಶಿಕ್ಷಕಿ ಆಶಿಯಾ, ಪೊನ್ನಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರುಗಳು, ತಾಯಂದಿರು, ಗರ್ಭಿಣಿಯರು ಹಾಜರಿದ್ದರು. ಗರ್ಭಿಣಿಯರಿಗೆ ಸಂಪ್ರದಾಯದಂತೆ ಸೀಮಂತದ ಶಾಸ್ತ್ರವಾಗಿ ಅರಶಿನ ಕುಂಕುಮ, ತಾಂಬೂಲವನ್ನು ನೀಡಲಾಯಿತು. ಹೆಚ್.ಆರ್. ಪುಷ್ಪ ಸ್ವಾಗತಿಸಿ, ಪಿ.ಎನ್. ರಾಧ ವಂದಿಸಿದರು.