ಸಿದ್ದಾಪುರ, ಅ. 17: ಸಮೀಪದ ವಾಲ್ನೂರು-ತ್ಯಾಗತ್ತೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವರಾತ್ರಿ ಪ್ರಯುಕ್ತ ಶಾರದಾ ಪೂಜೆ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ಅಡುಗೆ ಕೋಣೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಶಾಲೆಯಲ್ಲಿ ಸರಸ್ವತಿ ಪೂಜೆ ನಡೆಸುವ ಮೇಲ್ವಿಚಾರಣೆಯನ್ನು ಇತ್ತೀಚಿನ ವರ್ಷಗಳವರೆಗೂ ಚೇರ್‍ಮೆನ್ ಆಗಿದ್ದ ಎಂ,ಎನ್, ಭೈರಯ್ಯ ಎಂಬವರು ಉಸ್ತುವಾರಿ ವಹಿಸಿ ನೆರವೇರಿಸಿಕೊಡುತ್ತಿದ್ದು ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಮಗ ಸುರೇಶ್ ಶಾಲೆಯಲ್ಲಿ ಶಾರದಾ ಪೂಜೆ ನಡೆಸಲು ಸಹಾಯ ಮಾಡಿದರು. ನೂತನವಾಗಿ ನಿರ್ಮಾಣಗೊಂಡಿರುವ ಅಡುಗೆ ಕೋಣೆಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಕುಮಾರ್, ದಾನಿಗಳಾದ ಎಂ.ಬಿ.ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ, ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್‍ಕುಮಾರ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.