ಮಡಿಕೇರಿ, ಅ. 17: ಮಡಿಕೇರಿಯಲ್ಲಿ ಅ.19 ರಂದು ಶುಕ್ರವಾರ ರಾತ್ರಿ ನಾಡಹಬ್ಬ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಸರ್ವಸಿದ್ದತೆ ಕೈಗೊಳ್ಳಲಾಗಿದ್ದು, ಗಾಂಧಿ ಮೈದಾನದಲ್ಲಿ ರಾತ್ರಿಯಿಡೀ ಕಾರ್ಯಕ್ರಮಗಳನ್ನು ಜನತೆಗಾಗಿ ಆಯೋಜಿಸಲಾಗಿದೆ ಎಂದು ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ದಸರಾ ಸಮಿತಿ ವತಿಯಿಂದ ಆಯೋಜಿತಗೊಂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾವೇರಮ್ಮಸೋಮಣ್ಣ, ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಿಂದಾಗಿ ಈ ಬಾರಿ ಉದ್ದೇಶಿತ ರೀತಿಯಲ್ಲಿ ಮಡಿಕೇರಿಯಲ್ಲಿ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗದ ಪರಿಸ್ಥಿತಿಯಿತ್ತು. ಆದರೆ ದಸರಾ ದಿನದಂದು ಮಡಿಕೇರಿಗೆ ಸಾವಿರಾರು ಜನರು ಬರುವ ಹಿನ್ನಲೆಯಲ್ಲಿ ಗಾಂಧಿ ಮೈದಾನದಲ್ಲಿ ಶುಕ್ರವಾರ ರಾತ್ರಿ 7 ಗಂಟೆಯಿಂದ ಶನಿವಾರ ಮುಂಜಾನೆ 5 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲು ದಸರಾ ಸಮಿತಿ ನಿರ್ಧರಿಸಿದೆ ಎಂದರು.
ಮಡಿಕೇರಿ ನಗರಸಭೆಯಿಂದ ಈಗಾಗಲೇ ದಶಮಂಟಪಗಳು ಸಾಗುವ ರಸ್ತೆ ದುರಸ್ಥಿ ಕಾರ್ಯ ನಡೆದಿದೆ. ನಗರದಾದ್ಯಂತ ಶುಚಿತ್ವ ಸೇರಿದಂತೆ ಎಲ್ಲಾ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ.
(ಮೊದಲ ಪುಟದಿಂದ) ಗಾಂಧಿ ಮೈದಾನದಲ್ಲಿ ಜನರಿಗಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ನಗರಸಭಾಧ್ಯಕ್ಷೆಯೂ ಆಗಿರುವ ಕಾವೇರಮ್ಮ ಸೋಮಣ್ಣ ತಿಳಿಸಿದರು. ಈಗಾಗಲೇ ಮಡಿಕೇರಿಯ ಎಲ್ಲಾ ಕಡೆ ರಸ್ತೆಯ ಬದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ನಡೆದಿದೆ ನಗರಸಭೆ ವತಿಯಿಂದ ಮಡಿಕೇರಿ ನಗರಸಭೆ ಕಟ್ಟಡಕ್ಕೆ ದೀಪಾಲಂಕಾರ ಕೈಗೊಂಡಿರುವದಾಗಿ ತಿಳಿಸಿದರು. ಅಂದು ರಾತ್ರಿ ನಿಗದಿತ ರೀತಿಯಲ್ಲಿಯೇ ದಶಮಂಟಪಗಳ ಶೋಭಾಯಾತ್ರೆ, 4 ಶಕ್ತಿದೇವತೆಗಳ ಕರಗಗಳೂ ನಗರದಲ್ಲಿ ಸಂಚರಿಸಲಿವೆ ಎಂದೂ ಅವರು ಹೇಳಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾಹಿತಿ ನೀಡಿ, ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಶುಕ್ರವಾರ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಉದ್ಘಾಟಿಸಲಿದ್ದು, ಅದೇ ರಾತ್ರಿ 10.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಂದು ಕೊಡಗಿನ ವಿವಿಧ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಮ್ಯಾಜಿಕ್ ಷೋ, ಭಾರತೀಯ ಸಂಪ್ರದಾಯದ ಸಂಗೀತ, ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ದಸರಾ ಸಮಿತಿಯಲ್ಲಿ ಯಾವದೇ ಗೊಂದಲಗಳಿಲ್ಲ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗಿದೆ ಎಂದೂ ಮಹೇಶ್ ಜೈನಿ ತಿಳಿಸಿದರು. ಪ್ರಾಕೃತಿಕ ವಿಕೋಪದ ಹಿನೆÀ್ನಲೆಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸಿದ್ದರ ಹಿನೆÀ್ನಲೆಯಲ್ಲಿ ಪ್ರತೀವರ್ಷ ಕೈಗೊಳ್ಳಲಾಗುತ್ತಿದ್ದ ವೈವಿಧ್ಯಮಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲೇಬೇಕಾಯಿತು. ಆದರೆ ದಸರಾ ಸಮಿತಿಯ ಸರ್ವರ ತೀರ್ಮಾನದಂತೆ ವಿಜಯದಶಮಿ ದಿನದಂದು ರಾತ್ರಿಯಿಡೀ ಕಾರ್ಯಕ್ರಮ ಆಯೋಜನೆಗೆ ತೀರ್ಮಾನಿಸಲಾಗಿದೆ. ಪ್ರತೀವರ್ಷದಂತೆ ಕೊಡಗಿನ ಜನತೆ ಮಡಿಕೇರಿ ದಸರಾಕ್ಕೆ ಬಂದು ಯಶಸ್ವಿಗೊಳಿಸುವಂತೆ ಮಹೇಶ್ ಜೈನಿ ಕೋರಿದರು.
ದಸರಾ ಸಮಿತಿಯಲ್ಲಿ 10 ಲಕ್ಷ ರೂ. ಬಾಕಿಯಿದೆ ಎಂದು ಕೆಲವರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ದಸರಾ ಸಮಿತಿ 10 ಲಕ್ಷ ರೂ. ಸಾಲದಲ್ಲಿದೆ. ಕಳೆದ ವರ್ಷ ದಸರಾ ಸಮಿತಿಯಿಂದ ಪೆಂಡಾಲ್ ಗುತ್ತಿಗೆದಾರರಿಗೆ 10 ಲಕ್ಷ ರೂ. ನೀಡಲು ಬಾಕಿಯಿದ್ದು, ಇದೀಗ ಸರ್ಕಾರ ನೀಡಿರುವ 50 ಲಕ್ಷ ರೂ.ನಲ್ಲಿ ಹಳೇ ಬಾಕಿಯನ್ನೂ ತೀರಿಸಬೇಕಾದ ಹೊಣೆ ದಸರಾ ಸಮಿತಿಗಿದೆ ಎಂದೂ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಸಮಿತಿ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಸಿ.ದೇವಯ್ಯ ಮಾತನಾಡಿ, ಸಾಕಷ್ಟು ಸಂದಿಗ್ಧತೆಯ ನಡುವೆಯೂ ದಸರಾ ಸಮಿತಿಯು ಸಭೆ ಕೈಗೊಂಡು ಕೊನೇ ದಿನದ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ. ಈ ಮೂಲಕ ಮಡಿಕೇರಿಯ ದಸರಾ ಆಚರಣೆಗೆ ಸಮಿತಿ ಬದ್ದವಾಗಿದೆ. ಜನರು ಮಡಿಕೇರಿಯ ಬೆಳಕಿನ ದಸರಾಕ್ಕೆ ಬಂದು ಸಹಕರಿಸುವಂತೆ ಕೋರಿದರು. ಮಡಿಕೇರಿ ನಗರವ್ಯಾಪ್ತಿಯಲ್ಲಿ ಟ್ಯೂಬ್ ಲೈಟ್ ಅಳವಡಿಸಲು 5.50 ಲಕ್ಷ ರೂ., ಸಿ.ಸಿ.ಕ್ಯಾಮರ ಅಳವಡಿಕೆಗೆ 50 ಸಾವಿರ ರೂ. ವೇದಿಕೆ, ಪೆಂಡಾಲ್ ಸೇರಿದಂತೆ ವೇದಿಕೆ ಕಾರ್ಯಕ್ರಮಗಳಿಗಾಗಿ 2 ಲಕ್ಷ ರೂ. ಒಳಗೊಂಡಂತೆ ಜಿಎಸ್.ಟಿ ಸೇರಿ 8.25 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಎ.ಸಿ.ದೇವಯ್ಯ ಮಾಹಿತಿ ಒದಗಿಸಿದರು.
ವಿವಿಧ ಸರ್ಕಾರಿ ಇಲಾಖೆಗಳು ಮಡಿಕೇರಿ ದಸರಾಕ್ಕೆ ಸರ್ವ ರೀತಿಯ ಸಹಕಾರ ನೀಡುತ್ತಿದ್ದು, ಸಾರ್ವಜನಿಕರು, ಸಂಘಸಂಸ್ಥೆಗಳು ಇತಿಹಾಸ ಪ್ರಸಿದ್ದ ಮಡಿಕೇರಿ ದಸರಾ ಯಶಸ್ವಿಗೆ ಕೈಜೋಡಿಸುವಂತೆ ದಸರಾ ಸಮಿತಿ ಖಚಾಂಚಿ ಸಂಗೀತಾ ಪ್ರಸನ್ನ ಮನವಿ ಮಾಡಿದರು.