ವೀರಾಜಪೇಟೆ, ಅ. 17: ಪ್ರಕೃತಿ ವಿಕೋಪದ ಸಂತ್ರಸ್ತ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವದೇ ಅಗತ್ಯ ಪಡಿತರ ಸಾಮಗ್ರಿಗಳನ್ನು ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದನ್ನು ಸರಿಪಡಿಸದಿದ್ದರೆ 15ದಿನಗಳ ಗಡುವಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಕೊಡಗು ಡಿಸ್ಟ್ರಿಕ್ಟ್ ಬಿಲ್ಡಿಂಗ್ ವರ್ಕ್‍ರ್ಸ್ ಯೂನಿಯನ್ ಅಧ್ಯಕ್ಷ ಸಿ.ಜೆ. ವರ್ಗೀಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಗೀಸ್ ಅವರು, ವೀರಾಜಪೇಟೆ ಸುತ್ತಮುತ್ತ ಬೆಟ್ಟ ಪ್ರದೇಶಗಳಲ್ಲಿರುವ ಬಹುತೇಕ ಕಡುಬಡವರು ಪ್ರಕೃತಿ ವಿಕೋಪದಲ್ಲಿ ಸಿಲುಕಿ ನಲುಗಿ ಹೋಗಿದ್ದಾರೆ. ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ, ಅರಸುನಗರ, ನೆಹರೂನಗರದ ವ್ಯಾಪ್ತಿಗೆ ಬರುವ ತೆಲುಗರಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರದಿಂದ ಬರುವ ಪಡಿತರ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ನ್ಯಾಯಬದ್ಧವಾಗಿ ವಿತರಿಸದೆ ವಂಚಿಸುತ್ತಿದ್ದಾರೆ. ಈ ಹಿಂದೆ ಇದೇ ನ್ಯಾಂiÀiಬೆಲೆ ಅಂಗಡಿಗೆ ಫಲಾನುಭವಿಗಳಿಗಾಗಿ ಉಚಿತ ವಿತರಣೆಗಾಗಿ ಬಂದ ತಲಾ 35 ಕೆ.ಜಿ. ಅಕ್ಕಿ ವಿತರಣೆಯಲ್ಲಿಯೂ ಎಲ್ಲರಿಗೂ ನ್ಯಾಯಬದ್ಧವಾಗಿ ಅಕ್ಕಿಯನ್ನು ವಿತರಿಸದೆ ವಂಚಿಸಲಾಗಿದೆ. ಸಂತ್ರಸ್ತರ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿಯವರೇ ಪಡಿತರ ಸಾಮಗ್ರಿಗಳನ್ನು ದುರುಪಯೋಗಪಡಿಸಿಕೊಳ್ಳಲು ತಾಲೂಕು ಕಚೇರಿಯ ಆಹಾರ ಸರಬರಾಜು ಘಟಕದ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಈಗ ಇದೇ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿ ಹೊಂದಿದ ಸುಮಾರು 700 ಮಂದಿಗೂ ಅಧಿಕ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲು ಹೊಸ ಕ್ಯಾನ್ ಸಮೇತ ಐದು ಲೀಟರ್ ಸೀಮೆಎಣ್ಣೆ ದಾಸ್ತಾನು ಬಂದಿದೆ. ಆದರೆ ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳಿಗೆ ಅಳತೆಯಲ್ಲಿ ವಂಚಿಸಿ ಕೇವಲ ನಾಲ್ಕೂವರೆ ಲೀಟರ್‍ಗಳಷ್ಟು ಮಾತ್ರ ಸೀಮೆಎಣ್ಣೆ ವಿತರಿಸುತ್ತಿದ್ದಾರೆ. ಇದರ ಕುರಿತು ಜಿಲ್ಲಾಧಿಕಾರಿಯವರೇ ಸ್ವತಃ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ನಡಸಿದರೆ ದುರುಪಯೋಗ ಹಾಗೂ ವಂಚನೆ ಪ್ರಕರಣ ಬೆಳಕಿಗೆ ಬರಲಿದೆ ಎಂದರು. ಈ ಕುರಿತು ತಾಲೂಕು ಕಚೇರಿಯ ಆಹಾರ ಘಟಕದ ನಿರೀಕ್ಷಕರಲ್ಲಿ ವಿಚಾರಿಸಿದರೆ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ ಎಂದು ವರ್ಗೀಸ್ ದೂರಿದರು.
ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಸಂತ್ರಸ್ತ ಮಹಿಳೆ ಹೆಚ್.ಕೆ ಪಾರ್ವತಿ ಎಂಬವರು ಅನಾರೋಗ್ಯದಿಂದ ನರಳುತ್ತಿದ್ದು ಪಡಿತರಕ್ಕಾಗಿ ಅವರ ಪಡಿತರ ಚೀಟಿಯನ್ನು ಪಕ್ಕದ ಮನೆಯವರ ಬಳಿ ಕಳುಹಿಸಿದರೆ ಅಕ್ಕಿ ನೀಡಲು ನಿರಾಕರಿಸಿದ್ದಾರೆ. ಆರೋಗ್ಯ ಸುಧಾರಿಸಿಕೊಂಡು ಅಂಗಡಿಗೆ ತೆರಳಿದರೆ ಮಂಜುನಾಥ ನ್ಯಾಯಬೆಲೆ ಅಂಗಡಿಗೆ ನಿರಂತರ ಬಾಗಿಲು ಹಾಕಲಾಗಿರುತ್ತದೆ. ಯಾವ ಸಮಯದಲ್ಲಿ ಬಾಗಿಲು ತೆಗೆಯುತ್ತಾರೆ ಎಂಬದೇ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳ ತನಿಖೆಯಿಂದಲೇ ಈ ನ್ಯಾಯಬೆಲೆ ಅಂಗಡಿ ಅವ್ಯವಹಾರ ಬೆಳಕಿಗೆ ಬರಬೇಕೆಂದೂ ವರ್ಗೀಸ್ ತಿಳಿಸಿದ್ದಾರೆ.
ಈ ನ್ಯಾಯಬೆಲೆ ಅಂಗಡಿ ವಿರುದ್ಧ ಕೊಡಗು ಡಿಸ್ಟ್ರಿಕ್ಟ್ ಬಿಲ್ಡಿಂಗ್ ವರ್ಕರ್ಸ್ ಯೂನಿಯನ್ ವತಿಯಿಂದ ರಾಜ್ಯದ ಆಹಾರ ಇಲಾಖೆ ಸಚಿವರು, ಕೊಡಗು ಉಸ್ತುವಾರಿ ಸಚಿವರು, ಕೊಡಗು ಜಿಲ್ಲಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್‍ಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.