ಸುಂಟಿಕೊಪ್ಪ, ಅ. 17: ಹಲವು ವರ್ಷಗಳಿಂದ ಸುಂಟಿಕೊಪ್ಪ ಮಾರುಕಟ್ಟೆ ರಸ್ತೆಯಲ್ಲಿ ವ್ಯಾಪಾರಸ್ಥರು ಸಂತೆ ದಿನದಂದು ರಸ್ತೆಯ ಎರಡು ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು ಇದರಿಂದ ಈ ರಸ್ತೆಗಾಗಿ ಮಾರುಕಟ್ಟೆಗೆ ತೆರಳುವ ಗ್ರಾಹಕರಿಗೆ ಉಲುಗುಲಿ ಗ್ರಾಮಕ್ಕೆ ತೆರಳುವ ಗ್ರಾಮಸ್ಥರಿಗೆ ವಾಹನ ಚಾಲಕರಿಗೆ ರಸ್ತೆ ಬದಿ ವ್ಯಾಪಾರಸ್ಥರಿಂದ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಅಧ್ಯಕ್ಷರಿಗೆ ಮನವಿ ಮಾಡಿಕೊಂಡರೂ ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿರುದ್ಧ ತೀರ್ವ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿ ಅಲ್ಲೇ ಇದ್ದ ಠಾಣಾಧಿಕಾರಿ ಜಯರಾಮ್ ಬಳಿ ತಮ್ಮ ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಠಾಣಾಧಿಕಾರಿ ಜಯರಾಮ್ ರಸ್ತೆ ಬದಿಯ ಒಂದೇ ಕಡೆ ವ್ಯಾಪಾರಸ್ಥರನ್ನು ವ್ಯಾಪಾರ ಮಾಡುವಂತೆ ಮನವೊಲಿಕೆ ಮಾಡಿ ರಸ್ತೆಯ ಇನ್ನೊಂದು ಬದಿಗೆ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರಿಗೆ ಗ್ರಾಹಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು ಇದರಿಂದ ಹಲವು ವರ್ಷಗಳಿಂದ ಈ ರಸ್ತೆಯ ಸಮಸ್ಯೆ ಮುಕ್ತಾಯಗೊಂಡಿದ್ದು ಠಾಣಾಧಿಕಾರಿ ಜಯರಾಮ್ ಇವರ ಕಾರ್ಯವೈಖರಿಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.