ಚೆಟ್ಟಳ್ಳಿ, ಅ. 17: ದಸರಾದ ಸಂಭ್ರಮ ಎಲ್ಲೆಡೆಯಾದರೆ ಕೊಡಗಿನ ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಕುಂಚದಲ್ಲಿ ದಸರಾ ಸಂಭ್ರಮದ ಚಿತ್ರವು ಕಲಾತ್ಮಕವಾಗಿ ಮೂಡಿದೆ.

1997ರಲ್ಲಿ ದಸರಾದಲ್ಲಿ ಆನೆ ಅಂಬಾರಿಯ ಚಿತ್ರವನ್ನು ಮೈಸೂರು ದಸರಾಕ್ಕೆ ಆಯ್ಕೆಗೊಂಡು ಸ್ಟಿಕ್ಕರಾಗಿ ಬಳಸಿಕೊಳ್ಳಲಾಗಿತ್ತು. 1998ರಲ್ಲಿ ಮೈಸೂರಿನಲ್ಲಿ ನಡೆದ ರಂಗೋತ್ಸವದಲ್ಲಿ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. 1999ರ ಮೈಸೂರು ದಸರಾ ಪೈಂಟಿಂಗ್ ಎಕ್ಸಿಬಿಷನ್‍ನಲ್ಲಿ ಬಾಲ್ ಪೆನ್ನಿನಲ್ಲಿ ಅತೀ ನಾಜೂಕಾಗಿ ಬಿಡಿಸಿರುವ ಅಜ್ಜನ ಚಿತ್ರ ಬಹುಮಾನಕ್ಕೆ ಪಾತ್ರವಾಯಿತು. 2016 ನಂತರ ಮಡಿಕೇರಿ ದಸರಾ ಕಲಾಪ್ರದರ್ಶದಲ್ಲಿ ಹಲವು ಚಿತ್ರಗಳು ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾದವು. ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಹಲವು ವರ್ಷ ವಸ್ತು ಪ್ರದರ್ಶನ ಸಮಯದಲ್ಲಿ ಹಲವು ಆಕರ್ಷಕ ಚಿತ್ರಗಳನ್ನು ಬಿಡಿಸಿರುವ ಬಗ್ಗೆ ರೂಪೇಶ್ ನಾಣಯ್ಯ ಹೇಳುತ್ತಾರೆ.

ಮಡಿಕೇರಿ ತಾಲೂಕು ಮರಗೋಡು ಗ್ರಾಮದ ಉತ್ತಮ ಚಿತ್ರಕಲಾವಿದನಾಗಿರುವ ಐಮಂಡ ರೂಪೇಶ್ ನಾಣಯ್ಯ ಸಿದ್ದಾಪುರ, ಮೂರ್ನಾಡುವಿನಲ್ಲಿ ವ್ಯಾಸಂಗ, ನಂತರದಲ್ಲಿ ಮೈಸೂರಿನ ಚಾಮರಾಜೇಂದ್ರ ವಿಶ್ವಕಲಾ ಅಕಾಡೆÀಮಿಯಲ್ಲಿ ವ್ಯಾಸಂಗ ಮುಗಿಸಿ ತನ್ನ ಚಿತ್ರಕಲೆಯ ಬಗ್ಗೆ ಹೆಚ್ಚಿನ ಒಲವು ತೋರಿ ತಮ್ಮ ಊರಿನಲ್ಲಿ ಮಕ್ಕಳಿಗೆ ಚಿತ್ರಕಲಾ ತರಬೇತಿಯನ್ನು ನೀಡುತ್ತಾ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.-ಕರುಣ್ ಕಾಳಯ್ಯ