ಮಡಿಕೇರಿ, ಅ. 17: ಅಧಿಕಾರ ನೀಡುವ ಹಾಗೂ ಅಧಿಕಾರ ಹಿಂಪಡೆಯುವ ಅವಧಿಯನ್ನು ದೇವರು ನಿರ್ಧರಿಸಿರುತ್ತಾನೆ; ಹಾಗಾಗಿ ಭಾಗಮಂಡಲ, ತಲಕಾವೇರಿ ಭೇಟಿ ಬಗ್ಗೆ ತಾನೇನೂ ತಲೆಕೆಡಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ತನ್ನ ಮನಸ್ಥಿತಿಯನ್ನು ಸಾರ್ವಜನಿಕರೊಂದಿಗೆ ಹಾಗೂ ಮಾಧ್ಯಮದೊಂದಿಗೆ ಹಂಚಿಕೊಂಡರು.ಭಾಗಮಂಡಲಕ್ಕೆ ಭೇಟಿ ಕೊಟ್ಟರೆ ಅಧಿಕಾರ ಹೋಗುತ್ತದೆ ಎನ್ನುವ ಹಲವರ ವಾದವನ್ನು ತಾನು ಒಪ್ಪುವದಿಲ್ಲ; 2006ರಲ್ಲಿ ಮುಖ್ಯಮಂತ್ರಿಯಾಗುವ ಮೊದಲೂ ಇಲ್ಲಿಗೆ ಭೇಟಿ ನೀಡಿದ್ದೇನೆ; ಈಗಿನ ಅಧಿಕಾರಾವಧಿಯಲ್ಲಿ 2ನೇ ಬಾರಿಗೆ ಕಾವೇರಿ ತಾಯಿಯ ದರ್ಶನ ಪಡೆಯುತ್ತಿದ್ದು, ಅಧಿಕಾರ ಮುಖ್ಯ ಎನ್ನುವದಕ್ಕಿಂತ ಜನರ ನೆಮ್ಮದಿ ತನ್ನ ಜವಾಬ್ದಾರಿ ಎಂದರು.ಟಿಪ್ಪು - ತಲೆಕೆಡಿಸಿಕೊಂಡಿಲ್ಲ : ಈ ಬಾರಿಯ ಟಿಪ್ಪು ಜಯಂತಿ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಈಗಲೇ ತಲೆಕೆಡಿಸಿಕೊಂಡಿಲ್ಲ, ಇತರ ದೊಡ್ಡ ಜವಾಬ್ದಾರಿಗಳಿವೆ ಎಂದು ಮುಖ್ಯಮಂತ್ರಿಗಳು ಉತ್ತರಿಸಿದರು. ಈಗಿನ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ‘ಮೆರಿಟ್’ ಆಧಾರವಾಗಿಟ್ಟುಕೊಂಡಿದೆಯೇ ಹೊರತು ‘ಪೇಮೆಂಟ್’ ಅಲ್ಲ ಎಂದರು. ರಾಜ್ಯವನ್ನು ಕ್ರಿಮಿನಲ್ ವ್ಯವಸ್ಥೆಯಿಂದ ಹೊರತರಲು ಯತ್ನಿಸುತ್ತಿದ್ದು, ಇದಕ್ಕೆ ಬೆಂಗಳೂರು ಮೊದಲು ಸ್ವಚ್ಛ ಆಗಿರಬೇಕು ಎಂಬ ಆಕಾಂಕ್ಷೆ ತನ್ನದಾಗಿದೆ ಎಂದು ಮನದ ಇಂಗಿತ ವ್ಯಕ್ತಪಡಿಸಿದರು.