ತಲಕಾವೇರಿ, ಅ.17: ಪ್ರಸಕ್ತ ವರ್ಷ ಈ ಹಿಂದಿನ ಸಾಲಿಗಿಂತಲೂ ವಿರಳ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಜಯಘೋಷದ ನಡುವೆ ಜೀವನದಿ ಮಾತೆ ಕಾವೇರಿ ಪವಿತ್ರ ಕುಂಡಿಕೆಯಲ್ಲಿ ಆವೀರ್ಭವಿಸಿದಳು. ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಜಲ ಪ್ರವಾಹದಿಂದ ನೊಂದಿರುವ ಜನತೆ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿಲ್ಲ ಎಂದು ಅಂದಾಜಿಸಲಾಗಿದೆ. ಒಂದೆಡೆ ಮಂತ್ರಘೋಷ, ಮತ್ತೊಂದೆಡೆ ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ., ಕಾವೇರಮ್ಮನಿಗೆ ಜೈ ಎಂಬಿತ್ಯಾದಿ ಭಕ್ತರ ಉದ್ಘೋಷದ ನಡುವೆ ಕರುನಾಡಿನ ಅನ್ನದಾತೆ, ಪಾಪವಿನಾಶಿನಿ, ಕೊಡಗಿನ ಕುಲದೇವತೆ ಮಾತೆ ಕಾವೇರಿ ಮೇಷ ಲಗ್ನದಲ್ಲಿ ಸಮಯ.6.43ಕ್ಕೆ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡು ಭಕ್ತರನ್ನು ಹರಸಿದಳು.
ತೀರ್ಥೋದ್ಭವದ ಹಿನ್ನೆಲೆಯಲ್ಲಿ ಟಿ.ಎಸ್. ನಾರಾಯಣಾಚಾರ್ ನೇತೃÀ್ರತ್ವದಲ್ಲಿ ಹದಿನೈದು ಮಂದಿ ಅರ್ಚಕರ ತಂಡ ಸಂಜೆ 4.15ರ ವೇಳೆಗೆ ಆಗಮಿಸಿ ಪವಿತ್ರ ಕಾವೇರಿ ಕುಂಡಿಕೆಯಲ್ಲಿ ಪೂಜಾ ಕಾರ್ಯಗಳನ್ನು ಆರಂಭಿಸಿತು. ಎಂದಿನಂತೆ ಪವಿತ್ರ ಕುಂಡಿಕೆಯ ಸುತ್ತ ನೆರೆದಿದ್ದ ಭಕ್ತಾದಿಗಳು ಜೈ ಜೈ ಮಾತಾ ಕಾವೇರಿ ಮಾತಾ ಎಂದು ಭಜನೆ ಮಾಡುತ್ತಾ ಕಾವೇರಿಯ ದರುಶನಕ್ಕಾಗಿ ಕಾದು ಕುಳಿತಿದ್ದರು..ಪ್ರಾರಂಭದಿಂದಲೇ ಕ್ಷೇತ್ರದಲ್ಲಿÀ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂತು....
ಮುಖ್ಯಮಂತ್ರಿ ವೀಕ್ಷಣೆ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀರ್ಥೋದ್ಭವ ವೀಕ್ಷÀಣೆ ಮಾಡಿದುದು ವಿಶೇಷವಾಗಿತ್ತು. ಈ ಹಿಂದೆ ದಿವಂಗತ ಮುಖ್ಯಮಂತ್ರಿಗಳಾದ ಆರ್. ಗುಂಡೂರಾವ್, ಎಸ್. ಬಂಗಾರಪ್ಪ ಹಾಗೂ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಗಳಾಗಿ ತಲಕಾವೇರಿಗೆ ಆಗಮಿಸಿದ್ದರಾದರೂ ಕುಮಾರಸ್ವಾಮಿ ಅವರು ತೀರ್ಥೋದ್ಭವ ವೀಕ್ಷಿಸಿದ ಪ್ರಥಮ ಮುಖ್ಯಮಂತ್ರಿ ಎನಿಸಿದ್ದಾರೆ. ಮಾತೆ ಕಾವೇರಿ ದರ್ಶನದಿಂದ ಪುನೀತನಾದೆ ಎಂದು ರಾಜ್ಯದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಕಾವೇರಿ ತೀರ್ಥೋದ್ಭವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುಮು ಚುಮು ಚಳಿ.. ಕುಳಿರ್ಗಾಳಿ.. ನಡುವೆ ವರುಣನ ಸಿಂಚನವೂ ಕಾಣಿಸಿಕೊಂಡು ಪ್ರಾಕೃತಿಕ ಮೋಡಾಚ್ಛಾದಿತ ಮುಸ್ಸಂಜೆಯ ನಡುವೆ ಈ ಬಾರಿಯ ತೀರ್ಥೋದ್ಭವ ನೆರೆದಿದ್ದವರಲ್ಲಿ ವಿಶೇಷó ಭಕ್ತಿ ಭಾವ ಮೂಡಿಸಿತ್ತು. ಕಾವೇರಿ ತೀರ್ಥೋದ್ಭವ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಅಪ್ಪಚ್ಚು ರಂಜನ್ ಕೆ.ಜಿ.ಬೋಪಯ್ಯ, ವೀಣಾ ಅಚ್ಚಯ್ಯ, ಬೋಜೆಗೌಡ, ಪುಟ್ಟರಾಜು, ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಜಿಲ್ಲಾಧಿಕಾರಿ ಶ್ರೀ ವಿದ್ಯಾ, ಎಸ್.ಪಿ ಸುಮನ್ ಡಿ. ಪಣ್ಣೇಕರ್ ಮತ್ತಿತರರಿದ್ದರು.
ಪ್ರಸಕ್ತ ವರ್ಷ ಪ್ರಾಕೃತಿಕ ದುರಂತದ ನೋವು ಜನತೆಯಲ್ಲಿ ಮನೆ ಮಾಡಿತ್ತಾದರೂ ಕುಲದೇವಿ ಆರಾಧನೆಯಲ್ಲಿ ಯಾವದೇ ಅಡ್ಡಿ ಆತಂಕಗಳು ಜನತೆಯಲ್ಲಿ ಕಂಡು ಬರಲಿಲ್ಲ&hellidiv;... ಭಕ್ತ ಸಮೂಹ ಭಜನೆ.. ಕೈಯಲ್ಲಿ ತಳಿಯತಕ್ಕಿ ಬೊಳಕ್.. ದುಡಿಕೊಟ್ಟ್ ಪಾಟ್ ಪೂಜೆ ಪ್ರಾರ್ಥನೆಗಳ ಮೂಲಕ ಮಾತೆಯನ್ನು ಭಕ್ತಾದಿಗಳು ಬರಮಾಡಿಕೊಂಡರು.
ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಮಾತೆ ಕಾವೇರಿಗೆ ತೊಡಿಸುವದಕ್ಕಾಗಿ ನಿನ್ನೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಿಂದ ಚಿನ್ನಾಭರಣಗಳನ್ನು ತಲಕಾವೇರಿಗೆ ತರಲಾಗಿತ್ತು. ಇಂದು ಬೆಳಿಗ್ಗೆ 7 ಗಂಟೆಗೆ ಕಾವೇರಿ ಮಾತೆಗೆ ಚಿನ್ನಾಭರಣಗಳನ್ನು ವಿಧ್ಯುಕ್ತವಾಗಿ ತೊಡಿಸಿ ಅಲಂಕರಿಸಲಾಯಿತು.
ಕೊಡಗು ಏಕೀಕರಣ ರಂಗದಿಂದ ನಿರಂತರ ಅನ್ನದಾನ ಏರ್ಪಟ್ಟಿದೆ. ಇಂದಿನಿಂದ ಮುಂದಿನ ಕಿರು ಸಂಕ್ರಮಣದವರೆಗೆ ಪ್ರತಿ
(ಮೊದಲ ಪುಟದಿಂದ) ದಿನ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಲಿರುವದಾಗಿ ವಕ್ತಾರ ತಮ್ಮು ಪೂವಯ್ಯ ತಿಳಿಸಿದ್ದಾರೆ. ಏಕೀಕರಣರಂಗದೊಂದಿಗೆ ಕೊಡಗು ಗೌಡ ಯುವ ವೇದಿಕೆ, ಕೊಡವ ಮಕ್ಕಡ ಕೂಟ, ರಾಜ್ಯ ರೈತ ಸಂಘದÀ ಕೊಡಗು- ಮಂಡ್ಯ ಘಟಕಗಳು ಕೈಜೋಡಿಸಿರುವದು ವಿಶೇಷವೆನಿಸಿದೆ.
ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣಾ ಟ್ರಸ್ಟ್ನಿಂದ ಇಂದು ಪ್ರತ್ಯೇಕವಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆದಿದ್ದು, ಗುರುವಾರವು ಮುಂದುವರಿಯಲಿರುವದಾಗಿ ವಕ್ತಾರ ಕೆ.ಜೆ. ಭರತ್ ತಿಳಿಸಿದ್ದಾರೆ. ತಮಿಳನಾಡಿನ ಚೆಟ್ಟ್ಟಿಯಾರ್ ಬಳಗದಿಂದ ತಲಕಾವೇರಿಯ ಕೈಲಾಸಾಶ್ರಮದಲ್ಲಿ ಇಂದು ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ರವಿ ಅವರು ಉಸ್ತುವಾರಿ ಹೊತ್ತಿದ್ದರು.
ಕನ್ನಡ ಸಂಸ್ಕೃತಿ ಇಲಾಖೆ, ಭಗಂಡೇಶ್ವರ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ತಲಕಾವೇರಿಯಲ್ಲಿ ಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು.
ತಳಿರು ತೋರಣ ಸ್ವಾಗತ
ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಭಾಗಮಂಡಲ- ತಲಕಾವೇರಿ ಮಾರ್ಗದುದ್ದಕ್ಕೂ ಅಲ್ಲಲ್ಲಿ ತಳಿರು ತೋರಣಗಳೊಂದಿಗೆ ಶೃಂಗಾರಗೊಂಡಿದ್ದವು. ಭಗಂಡೇಶ್ವರ ದೇವಾಲಯ ಸನ್ನಿಧಿ ಹಾಗೂ ತಲಕಾವೇರಿಯಲ್ಲಿ ಆಕರ್ಷಕ ಪುಷ್ಪಾಲಂಕಾರ ಮಾಡಲಾಗಿತ್ತು.. ಭಾಗಮಂಡಲದಲ್ಲಿ ಎಂದಿನಂತೆ ಭಿಕ್ಷುಕರ ಸಂಖ್ಯೆ ಕಂಡುಬಂದಿತು. ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆಸ್ಪತ್ರೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಇತರ ಹಲವು ಇಲಾಖೆಗಳ ಮಳಿಗೆಗಳು, ವಸ್ತುಪ್ರದರ್ಶನ, ರೈತರಿಗೆ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ವ್ಯಾಪ್ತಿಯಲ್ಲಿ ಸಾಕಷ್ಟು ಅಂಗಡಿ ಮಳಿಗೆಗಳು ತೆರೆಯಲ್ಪಟ್ಟಿದ್ದವು. ಕ್ಷೇತ್ರದಲ್ಲಿ ಶುಚಿತ್ವ ಕಾಪಾಡುವಂತೆ ಆಗಿಂದಾಗ್ಗೆ ಧ್ವನಿವರ್ಧಕ ಮೂಲಕ ದೇವಾಲಯದ ಸಮಿತಿಯವರು ಮನವಿ ಮಾಡುತ್ತಿದ್ದರು.
ಕೆ.ಎಸ್.ಆರ್. ಟಿ.ಸಿ ವ್ಯವಸ್ಥೆ
ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಧೆಡೆಗಳಿಂದ ಒಟ್ಟು 30 ವಿಶೇಷ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. 20 ಬಸ್ಗಳು ಭಾಗಮಂಡಲದವರೆÉಗೆ ಸಂಚರಿಸಿದರೆ, ಅಲ್ಲಿಂದ ತಲಕಾವೇರಿಗೆ 10 ಬಸ್ಗಳು ಆಗಿಂದಾಗ್ಗೆ ಭಕ್ತಾದಿಗಳನ್ನು ಕರೆದೊಯ್ಯಲು ಸಂಚರಿಸುತ್ತಿದ್ದವು.
ಭಾಗಮಂಡಲದಲ್ಲಿ ವಿರಳ ಸಂಖ್ಯೆ
ತುಲಾ ಸಂಕ್ರಮಣ ಜಾತ್ರೆಯ ಹಿನ್ನೆಲೆಯಲ್ಲಿ ಭಗಂಡೇಶ್ವರ ಸನ್ನಿಧಿ ಸೇರಿದಂತೆ ಗಣಪತಿ, ಮಹಾವಿಷ್ಣು, ಸುಬಹ್ಮಣ್ಯ ಸನ್ನಿಧಿಗಳು ವಿಶೇಷವಾದ ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದವು. ಇಂದು ಬೆಳಗ್ಗಿನಿಂದಲೇ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳು ಪುಣ್ಯಸ್ನಾನ ಮಾಡಿ ಪಿಂಡ ಪ್ರದಾನ ಕ್ರಿಯೆಗಳನ್ನು ನೆರವೇರಿಸುತ್ತಿದ್ದುದು ಕಂಡು ಬಂತು. ಭಕ್ತಾದಿಗಳ ಸಂಖ್ಯೆ ಕಡಿಮೆಯಿತ್ತು. ಕಾವೇರಿ ಜಾತ್ರೆ ಸಂದರ್ಭ ಭಕ್ತಾದಿಗಳಿಂದ ಗಿಜಿಗುಡುತ್ತಿದ್ದ ತ್ರಿವೇಣಿ ಸಂಗಮ ವ್ಯಾಪ್ತಿಯಲ್ಲಿ ಈ ಬಾರಿ ಭಕ್ತರ ಸಂಖ್ಯೆ ತೀರಾ ವಿರಳವಾಗಿತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳು ತರೆಯಲ್ಪಟ್ಟಿದ್ದವು. ತ್ರಿವೇಣಿ ಸಂಗಮ ವ್ಯಾಪ್ತಿಯಲ್ಲಿ ಪುಣ್ಯಸ್ನಾನ ಮಾಡುವವರು, ಮುಡಿ ನೀಡುವವರು ಸೇರಿದಂತೆ ಕ್ಷೇತ್ರದಲ್ಲಿ ನೆರೆದ ಭಕ್ತಾದಿಗಳು ಶುಚಿತ್ವ ಕಾಪಾಡುವಂತೆ ಆಗಿಂದಾಗ್ಗೆ ಧ್ವನಿವರ್ಧಕದ ಮೂಲಕ ದೇವಾಲಯ ಸಮಿತಿಯಿಂದ ಮನವಿ ಮಾಡಲಾಗುತ್ತಿತ್ತು.ಮಧ್ಯಾಹ್ನ 2 ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿ ಕೇಶ ಮುಂಡನಕ್ಕೆ ಅವಕಾಶ ನೀಡಲಾಗಿತ್ತು. 3 ಗಂಟೆಯವರೆಗೆ ಪಿಂಡ ಪ್ರದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಮಧ್ಯಾಹ್ನದವರೆಗೆ ಕೇಶಮುಂಡನಕ್ಕೂ ಭಕ್ತರ ಸಂಖ್ಯೆ ತೀರಾ ಕಡಿಮೆಯಿತ್ತು. ಸಂಗಮದ ತೀರದಲ್ಲಿ ಭಿಕ್ಷುಕರ ಸಂಖ್ಯೆ ಎಂದಿನಂತಿತ್ತು. ಭಾಗಮಂಡಲ ಭಗಂಡೇಶ್ವರ ಕ್ಷೇತ್ರದಲ್ಲಿ ದೇವಾಲಯ ಸಮಿತಿಯಿಂದ ಎಂದಿನಂತೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಕಾವೇರಿ ತೀರ್ಥೋದ್ಭವಕ್ಕೆ ಮುಖ್ಯಮಂತ್ರಿ ಆಗಮನ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪೊಲೀಸರು ಬಿಗಿಗೊಳಿಸಿದ್ದರು. ಅನುಮತಿ ಪಡೆದಿದ್ದ ವಾಹನಗಳನ್ನು ಮಾತ್ರ ಭಾಗಮಂಡಲದಿಂದ ತಲಕಾವೇರಿಯತ್ತ ಬಿಡಲಾಗುತ್ತಿತ್ತು. ಅಲ್ಲಲ್ಲಿ ವಾಹನಗಳ ತಪಾಸಣೆ ನಡೆಯುತ್ತಿತ್ತು. ಕಾವೇರಿ ಕ್ಷೇತ್ರ ಸಂಪೂರ್ಣವಾಗಿ ಪೊಲೀಸ್ ಸರ್ಪಗಾವಲಿನಲ್ಲಿತ್ತು.
ಕಾವೇರಿ ತೀರ್ಥೋದ್ಭವ ಸಂದರ್ಭ ಸಿಎಂ ಕುಮಾರಸ್ವಾಮಿ, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಂಸದ ಪ್ರತಾಪ ಸಿಂಹ, ಶಾಸಕರುಗಳಾದ ಅಪ್ಪಚ್ಚು ರಂಜನ್ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಬೋಜೆಗೌಡ, ಪುಟ್ಟರಾಜು, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಎಸ್ಪಿ ಸುಮನ್ ಮತ್ತಿತರರಿದ್ದರು.
- ಚಿತ್ರ, ವರದಿ : ಉಜ್ವಲ್ರಂಜಿತ್, ಸುನಿಲ್ ಕೆ.ಡಿ. ಸುಧೀರ್