ಸುಂಟಿಕೊಪ್ಪ,ಅ.16:ಸುಂಟಿಕೊಪ್ಪ ಯುವಕನೊಬ್ಬ ಕೆಲಸದ ನಿಮಿತ್ತ ಗೋವಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ಮಸಣಿಕಮ್ಮ ದೇವಸ್ಥಾನ ಸಮೀಪ ವಾಸವಿರುವ ಮಣಿ ಎಂಬವರ ಉತ್ರ ವಿಘ್ನೇಶ್ (20) ದಾರುಣವಾಗಿ ಅಂತ್ಯಕಂಡಿರುವ ಯುವಕನಾಗಿದ್ದೇನೆ.

ತಮಿಳುನಾಡಿನಲ್ಲಿ ಮರದ ಕೆಲಸ ಮತ್ತು ಮನೆಗಳಿಗೆ ಬಣ್ಣ ಬಳಿಯುವ ಕೆಲಸ ನಿರ್ವಹಿಸುತ್ತಿದ್ದ ಈತ ತಾ.15 ರಂದು ಕಾರ್ಯನಿಮಿತ್ತ ಕೇರಳ ಮೂಲಕ ಗೋವಾಕ್ಕೆ ರೈಲಿನಲ್ಲಿ ತೆರಳುತ್ತಿದ್ದಾಗ ಬಡಂಗಾವ್ ಕೊಂಕಣ ರೈಲ್ವೇ ಸಮೀಪ ಆಯತಪ್ಪಿ ಕೆಳಗೆ ಬಿದ್ದು ಅಸುನೀಗಿದ್ದಾನೆ ಎಂದು ಹೇಳಲಾಗಿದೆ. ಆದರೆ ನೈಜ ವಾಸ್ತವಾಂಶ ಗೋವಾ ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಗೋವಾ ರೈಲ್ವೇ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಸುಂಟಿಕೊಪ್ಪ ಠಾಣಾಧಿಕಾರಿಯವರಿಗೆ ಮಾಹಿತಿ ರವಾನಿಸಿದ್ದು ಅದರ ಮೇರೆ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಕುಟುಂಬಸ್ಥರಿಗೆ ಮಾಹಿತಿ ನೀಡಿ ಕುಟುಂಬಸ್ಥರೊಂದಿಗೆ ಪೊಲೀಸ್ ಸಿಬ್ಬಂದಿಗಳನ್ನು ಗೋವಾಕ್ಕೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗುವದು ಎಂದು ತಿಳಿಸಿದರು.