ಭಾಗಮಂಡಲ, ಅ 16: ಪವಿತ್ರ ಕಾವೇರಿ ತೀರ್ಥೋದ್ಭವ ತಾ.17ರಂದು (ಇಂದು)ಸಂಜೆ 6.43ಗಂಟೆಗೆ ನೆರವೇರಲಿದೆ. ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಮಾತೆ ಕಾವೇರಿಗೆ ತೊಡಿಸುವದಕ್ಕಾಗಿ ಇಂದು ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ಚಿನ್ನಾಭರಣಗಳನ್ನು ತಲಕಾವೇರಿಗೆ ಕೊಂಡೊಯ್ಯಲಾಯಿತು. ಭಗಂಡೇಶ್ವರ ದೇವಾಲಯ ಕಾರ್ಯನಿರ್ವಾಹಕಾಧಿಕಾರಿ ಜಗದೀಶ್ ಕುಮಾರ್ ಅವರಿಂದ ತಕ್ಕರಾದ ಕೋಡಿ ಮೋಟಯ್ಯ ಅವರು ಚಿನ್ನಾಭರಣಗಳನ್ನು ಪಡೆದುಕೊಂಡರು. ಬಳಿಕ ನಾದ ಸ್ವರದೊಂದಿಗೆ ಮಾರ್ಕೆಟ್‍ವರೆಗೆ ಮೆರವಣಿಗೆ ಮೂಲಕ ಚಿನ್ನಾಭರಣಗಳನ್ನು ತಂದು ಅಲ್ಲಿಂದ ವಾಹನದಲ್ಲಿ ತಲಕಾವೇರಿಗೆ ಕೊಂಡೊಯ್ಯಲಾಯಿತು. ಈ ಸಂದರ್ಭ ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಬಳ್ಳಡ್ಕ ಅಪ್ಪಾಜಿ, ಸಮಿತಿಯ ಸದಸ್ಯರುಗಳು, ಜಿಲ್ಲೆಯ ಎಲ್ಲಾ ಸಮುದಾಯ ಬಾಂಧವರು ಇದ್ದರು. ತಾ.17ರಂದು(ಇಂದು)ಬೆಳಿಗ್ಗೆ 7 ಗಂಟೆಗೆ ಕಾವೇರಿ ಮಾತೆಗೆ ಚಿನ್ನಾಭರಣಗಳನ್ನು ತೊಡಿಸಲಾಗುತ್ತದೆ.(ಮೊದಲ ಪುಟದಿಂದ) ಹೆಚ್ಚಿನ ಭದ್ರತೆ : ಕಾವೇರಿ ತೀರ್ಥೋದ್ಭವಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಕ್ಷೇತ್ರದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಡಿವೈಎಸ್ಪಿ ಸುಂದರ್ ರಾಜ್ ಅವರು ಇಂದು ಕ್ಷೇತ್ರದಲ್ಲಿಂದು ಖುದ್ದು ಹಾಜರಿದ್ದು ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಕಾವೇರಿ ಜಾತ್ರೆ ಹಿನ್ನೆಲೆ ಕ್ಷೇತ್ರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟಿವೆ. ಸ್ಥಳೀಯ ಪಂಚಾಯಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. -ಕುಯ್ಯಮುಡಿ ಸುನಿಲ್