ಮಡಿಕೇರಿ, ಅ. 16: ತಲಕಾವೇರಿಯಲ್ಲಿ ತಾ. 17ರಂದು (ಇಂದು) ನಡೆಯಲಿರುವ ಕಾವೇರಿ ತೀರ್ಥೋದ್ಭವ ಹಾಗೂ ತಾ. 19ರಂದು ನಡೆಯಲಿರುವ ಮಡಿಕೇರಿ ದಸರಾ ಉತ್ಸವ ಯಾವದೇ ಅಡೆ ತಡೆಗಳಿಲ್ಲದೆ ನೆರವೇರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ತಿಳಿಸಿದ್ದಾರೆ.ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಕಾವೇರಿ ಜಾತ್ರೆಗೆ ಸಂಬಂಧಿಸಿದಂತೆ ಐದು ಡಿವೈಎಸ್ಪಿ, 15 ವೃತ್ತ ನಿರೀಕ್ಷಕರು, 25 ಉಪ ನಿರೀಕ್ಷಕರು, 80 ಸಹಾಯಕ ಉಪ ನಿರೀಕ್ಷಕರು, 600 ಕಾನ್ಸ್‍ಟೇಬಲ್‍ಗಳು, 100 ಮಹಿಳಾ ಕಾನ್ಸ್‍ಟೇಬಲ್‍ಗಳು, 200 ಗೃಹ ರಕ್ಷಕದಳ ಸಿಬ್ಬಂದಿ, 3 ಕೆಎಸ್‍ಆರ್‍ಪಿ, 8 ಡಿಎಆರ್, 2 ಎನ್‍ಎಫ್, 3 ಎ.ಸಿ.ಟೀಂ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 20 ಸಿಸಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಮಡಿಕೇರಿ ದಸರಾ ಉತ್ಸವಕ್ಕಾಗಿಯೂ ಸಾಕಷ್ಟು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು. ಕಾವೇರಿ ತೀರ್ಥೋದ್ಭವ ಸಂಬಂಧ ವಾಹನ ಮಾರ್ಗ, ನಿಲುಗಡೆ ಸಂಬಂಧ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.

ವಾಹನ ಮಾರ್ಗ : ಕುಶಾಲನಗರ-ಸೋಮವಾರಪೇಟೆ ಕಡೆಗಳಿಂದ ತಲಕಾವೇರಿಗೆ ಆಗಮಿಸುವ ಭಕ್ತಾಧಿಗಳು ಮಡಿಕೇರಿ ಜಿ.ಟಿ. ವೃತ್ತ, ಮೂರ್ನಾಡು ರಸ್ತೆ, ಮೇಕೇರಿ ರಸ್ತೆ ಜಂಕ್ಷನ್ ಮಾರ್ಗವಾಗಿ ಉಡೋತ್‍ಮೊಟ್ಟೆಯಿಂದಾಗಿ ಭಾಗಮಂಡಲ ಕಡೆಗೆ ತೆರಳಬೇಕು.

ಕುಟ್ಟ-ಮಾಕುಟ್ಟ-ವೀರಾಜಪೇಟೆ ಕಡೆಗಳಿಂದ ಬರುವ ವಾಹನಗಳು ವೀರಾಜಪೇಟೆ ಕದನೂರು-ಕಡಂಗ-ಕಕ್ಕಬೆ-ನೆಲಜಿ-ಬಲ್ಲಮಾವಟಿ-ಅಯ್ಯಂಗೇರಿ ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವದು.

ಪಾಲಿಬೆಟ್ಟ-ಸಿದ್ದಾಪುರ-ಅಮ್ಮತ್ತಿ-ಕೊಂಡಂಗೇರಿ ಮಾರ್ಗವಾಗಿ ಬರುವ ವಾಹನಗಳು ಮೂರ್ನಾಡು-ನಾಪೋಕ್ಲು-ಅಯ್ಯಂಗೇರಿ ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವದು.

ಸುಳ್ಯ-ಸಂಪಾಜೆ ಮಾರ್ಗವಾಗಿ ಬರುವ ವಾಹನಗಳು ಕಾಟಕೇರಿ, ತಾಳತ್ತಮನೆ ಉಟೋತ್‍ಮೊಟ್ಟೆ ಮಾರ್ಗವಾಗಿ ಭಾಗಮಂಡಲದ ಕಡೆಗೆ ತೆರಳಬೇಕು.

ಭಾಗಮಂಡಲದಿಂದ ಬೆಟ್ಟಗೇರಿ ಮಾರ್ಗವಾಗಿ ಮಡಿಕೇರಿಗೆ ಮತ್ತು ಮಂಗಳೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಅಪ್ಪಂಗಳ, ಸ್ಪೈಸಸ್ ಬೋರ್ಡ್ ಜಂಕ್ಷನ್‍ನಿಂದ ಪನ್ಯ, ಕಾಟಕೇರಿ ಮಾರ್ಗವಾಗಿ ಮಂಗಳೂರು-ಮಡಿಕೇರಿ ಕಡೆಗೆ ತೆರಳುವದು (ಏಕಮುಖ ಸಂಚಾರ).

ಮಡಿಕೇರಿ ಕಡೆಯಿಂದ ಆಗಮಿಸುವ ಖಾಸಗಿ ಬಸ್‍ಗಳು ಕರಿಕೆ ರಸ್ತೆ ಜಂಕ್ಷನ್‍ನಲ್ಲಿ ಭಕ್ತಾದಿಗಳನ್ನು ಇಳಿಸಿ ರಸ್ತೆ ಬದಿಯಲ್ಲಿ ಬಸ್‍ಗಳನ್ನು ಮಡಿಕೇರಿ ಕಡೆಗೆ ಮುಖ ಮಾಡಿ ನಿಲ್ಲಿಸಬೇಕು.

ಮಡಿಕೇರಿ ಕಡೆಯಿಂದ ಆಗಮಿಸುವ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಚಾಮುಂಡಿ ಕಳದಲ್ಲಿ ಭಕ್ತಾದಿಗಳನ್ನು ಇಳಿಸಿ ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವ ಕಾರ್ಯ ಮಾಡಬೇಕು.

ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ಎಲ್ಲಾ ಭಕ್ತಾದಿಗಳಿಗೆ ಭಾಗಮಂಡಲ ಮಾರ್ಕೆಟ್‍ನಿಂದ ಕೆ.ಎಸ್.ಆರ್.ಟಿ.ಸಿ. ಬಸ್‍ನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದರು.

ವಾಹನ ನಿಲುಗಡೆ : ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆ ಬಗ್ಗೆ ಭಾಗಮಂಡಲದ ಚಾಮುಂಡಿ ಕಳ ಮತ್ತು ಭಾಗಮಂಡಲದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

(ಮೊದಲ ಪುಟದಿಂದ) ವಿ.ಐ.ಪಿ. ಮತ್ತು ಮೀಡಿಯಾ ಓ.ಬಿ. ವಾಹನ ಪಾಸ್ ಹೊಂದಿದವರ ವಾಹನಗಳು ತಲಕಾವೇರಿ ಉಪ ಠಾಣಾ ಮುಂಭಾಗದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕ್ರಮಬದ್ಧವಾಗಿ ನಿಲ್ಲಿಸಬೇಕು.

ಮೀಡಿಯಾ ಪಾಸ್ ಹೊಂದಿದ ಇತರೆ ವಾಹನಗಳು ಫಾರೆಸ್ಟ್ ಐ.ಬಿ.ಗೆ ಹೋಗುವ ರಸ್ತೆಯಲ್ಲಿ ಖಾಲಿ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.

ತೀರ್ಥ ಪ್ರಸಾದ ವಿತರಣೆಗೆ ಪಾಸ್ ಪಡೆದು ಆಗಮಿಸುವ ಎಲ್ಲಾ ವಾಹನಗಳು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೇಲ್ಭಾಗದ ಖಾಲಿ ಜಾಗದಲ್ಲಿ ನಿಲುಗಡೆಗೊಳಿಸಿ ತೀರ್ಥೋದ್ಭವದ ಎರಡು ಗಂಟೆಯ ನಂತರ ದೇವಾಲಯದ ಬಳಿ ತೀರ್ಥ ಪಡೆಯುವ ಬಗ್ಗೆ ತೆರಳಬೇಕು.

ಸಾಮಾನ್ಯ ವಾಹನ ಪಾಸ್ ಹೊಂದಿದ ವಾಹನಗಳನ್ನು ತಲಕಾವೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಖಾಲಿ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.

ತಲಕಾವೇರಿಯಲ್ಲಿ ಲಘು ವಾಹನಗಳ ನಿಲುಗಡೆ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎಡ ಭಾಗದ ಖಾಲಿ ಜಾಗದಲ್ಲಿ ಸ್ಥಳಾವಕಾಶ ನೀಡಲಾಗಿದೆ.

ತಲಕಾವೇರಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಬಗ್ಗೆ ಹಳೆ ಐ.ಬಿ. ಸಮೀಪದ ಜಾಗ, ತಲಕಾವೇರಿ ನಾರಾಯಣ ಆಚಾರ್ ಅವರ ಮನೆಗೆ ತೆರಳುವ ರಸ್ತೆ ಬದಿಯಲ್ಲಿನ ಖಾಲಿ ಜಾಗದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳು ವಾಹನದಲ್ಲಿ ತಲಕಾವೇರಿವರೆಗೆ ಆಗಮಿಸಿ ಅಧಿಕಾರಿಗಳನ್ನು ಇಳಿಸಿ ವಾಹನವನ್ನು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮೇಲ್ಭಾಗದಲ್ಲಿನ ಖಾಲಿ ಜಾಗದಲ್ಲಿ ವಾಹನ ನಿಲುಗಡೆಗೊಳಿಸಬೇಕು.

ವಾಹನ ನಿಷೇದ : ಭಾಗಮಂಡಲ ಕೆ.ಎಸ್.ಟಿ.ಡಿ.ಸಿ.ಯಿಂದ ತಲಕಾವೇರಿಯವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇದಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಲಕಾವೇರಿ ಉಪ ಠಾಣೆಯವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆ ನಿಷೇದಿಸಲಾಗಿದೆ. ಪಾಸ್ ಹೊಂದಿದ ಎಲ್ಲಾ ವಾಹನಗಳು ತಾ. 17ರ ಸಂಜೆ 4 ಗಂಟೆ ಒಳಗಾಗಿ ತಲಕಾವೇರಿಗೆ ಆಗಮಿಸಬೇಕು. ನಂತರ ಪಾಸ್‍ಗಳನ್ನು ಪರಿಗಣಿಸಲಾಗುವದಿಲ್ಲ. ಮುಖ್ಯಮಂತ್ರಿ ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಎರಡು ಎ.ಎನ್.ಎಫ್. ತಂಡಗಳಿಂದ ಭಾಗಮಂಡಲ ಮತ್ತು ತಲಕಾವೇರಿ ಸರಹದ್ದಿನಲ್ಲಿ ಕೋಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಮಾಹಿತಿಯಿತ್ತರು.

ಮಡಿಕೇರಿ ದಸರಾ ಸಂಬಂಧ : ಸೋಮವಾರಪೇಟೆ, ಮಾದಾಪುರ ಮಾರ್ಗ ಮತ್ತು ಕುಶಾಲನಗರ, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ದಸರಾ ವೀಕ್ಷಣೆಗೆ ಆಗಮಿಸುವ ಎಲ್ಲಾ ಲಘು ವಾಹನಗಳು ಸಂಪಿಗೆ ಕಟ್ಟೆಯಿಂದ ಗದ್ದಿಗೆ-ಕಾನ್ವೆಂಟ್ ಜಂಕ್ಷನ್-ಮೈತ್ರಿ ಮಾರ್ಗವಾಗಿ ಎಫ್.ಎಂ.ಸಿ. ಕಾಲೇಜು, ಐ.ಟಿ.ಐ. ಮುಂಭಾಗದ ಖಾಲಿ ಜಾಗ, ಹೊಸ ಬಸ್ ನಿಲ್ದಾಣ, ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನಗಳಲ್ಲಿ ನಿಲುಗಡೆಗೊಳಿಸಬಹುದಾಗಿದೆ.

ಸೋಮವಾರಪೇಟೆ, ಮಾದಾಪುರ ಮಾರ್ಗ ಮತ್ತು ಕುಶಾಲನಗರ, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ದಸರಾ ವೀಕ್ಷಣೆಗೆ ಆಗಮಿಸುವ ಖಾಸಗಿ ಬಸ್‍ಗಳು ಕಮಾನ್‍ಗೇಟ್-ಸುದರ್ಶನ ವೃತ್ತದ ಮಾರ್ಗವಾಗಿ ಆರ್.ಎಂ.ಸಿ. ಯಾರ್ಡ್ ಒಳಗಡೆ ಇರುವ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ಸಿದ್ದಾಪುರ, ಚೆಟ್ಟಳ್ಳಿ, ವೀರಾಜಪೇಟೆ, ಮಂಗಳೂರು ಕಡೆಯಿಂದ ಬರುವ ಎಲ್ಲಾ ಲಘು ವಾಹನಗಳು ಜಿ.ಟಿ. ವೃತ್ತ, ಸುದರ್ಶನ ವೃತ್ತ, ಚೈನ್‍ಗೇಟ್ ಮಾರ್ಗವಾಗಿ, ಗೌಡ ಸಮಾಜ ರಸ್ತೆಯ ಮೂಲಕ ಮ್ಯಾನ್ಸ್ ಕಾಂಪೌಂಡ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಮೈದಾನದಲ್ಲಿ ವಾಹನವನ್ನು ನಿಲುಗಡೆಗೊಳಿಸಬಹುದು. (ಏಕಮುಖ ಸಂಚಾರ)

ಮ್ಯಾನ್ಸ್ ಕಾಂಪೌಂಡ್ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಮೈದಾನದಲ್ಲಿ ನಿಲುಗಡೆಗೊಳಿಸಿದ ವಾಹನಗಳು ವಾಪಾಸ್ಸು ಮೇಲಿನ ಗೌಡ ಸಮಾಜ, ರಾಘವೇಂದ್ರ ದೇವಸ್ಥಾನ ಮಾರ್ಗವಾಗಿ ಚೈನ್‍ಗೇಟ್ ಮುಖಾಂತರ ನಿರ್ಗಮಿಸಬೇಕು (ಏಕಮುಖ ಸಂಚಾರ)

ದ್ವಿಚಕ್ರ ವಾಹನಗಳ ನಿಲುಗಡೆಗೆ ಶಾಂತಿ ಚರ್ಚ್ ಎದುರುಗಡೆ ಇರುವ ಸರಕಾರಿ ಶಾಲಾ ಮೈದಾನದಲ್ಲಿ ಅವಕಾಶ ನೀಡಲಾಗಿದೆ.

ಮಂಗಳೂರು ಮತ್ತು ಭಾಗಮಂಡಲ ಕಡೆಗೆ ಹೋಗುವ ಎಲ್ಲಾ ವಾಹನಗಳು ಜಿ.ಟಿ. ವೃತ್ತ - ಮೂರ್ನಾಡು ರಸ್ತೆ-ಮೇಕೇರಿ ಮಾರ್ಗವಾಗಿ ತಾಳತ್ತ್‍ಮನೆ ಮುಖಾಂತರ ಮಂಗಳೂರು ಕಡೆಗೆ ತೆರಳಬೇಕು.

ಮೈಸೂರು ಕಡೆಯಿಂದ ಮಂಗಳೂರಿಗೆ ಹೋಗುವ ಎಲ್ಲಾ ವಾಹನಗಳು ಪಿರಿಯಾಪಟ್ಟಣ- ಮಾಲ್ದಾರೆ-ಸಿದ್ದಾಪುರ-ನೆಲ್ಲಿಹುದಿಕೇರಿ-ಅರೆಕಾಡು-ಮರಗೋಡು-ಹಾಕತ್ತೂರು-ಮೇಕೇರಿ-ತಾಳತ್‍ಮನೆ ಮಾರ್ಗವಾಗಿ ತೆರಳಬಹುದು.

ವೀರಾಜಪೇಟೆ, ನಾಪೋಕ್ಲು ಕಡೆಯಿಂದ ಆಗಮಿಸುವ ಎಲ್ಲಾ ವಾಹನಗಳು ಮೇಕೇರಿ-ತಾಳತ್ತ್‍ಮನೆ ಮಾರ್ಗವಾಗಿ ಮಡಿಕೇರಿ ಆಗಮಿಸಿ ನಿಗದಿಪಡಿಸಲಾದ ಸ್ಥಳಗಳಲ್ಲಿ ನಿಲುಗಡೆಗೊಳಿಸಬೇಕು.

ವಾಹನ ನಿಷೇದ: ಮಡಿಕೇರಿ ಕಮಾನ್ ಗೇಟಿನಿಂದ ಸುದರ್ಶನ ವೃತ್ತ-ಜಿ.ಟಿ. ವೃತ್ತ, ತಾಳತ್ತ್‍ಮನೆ, ಮೇಕೇರಿ ರಸ್ತೆಯವರೆಗೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇದಿಸಲಾಗಿದೆ.

ಮಡಿಕೇರಿ ನಗರದ ಒಳಭಾಗದಲ್ಲಿರುವ ಮುಖ್ಯರಸ್ತೆ, ಗಣಪತಿ ಬೀದಿ, ಮಹದೇವಪೇಟೆ, ಕೊಹಿನೂರ್ ರಸ್ತೆ, ಕಾಲೇಜು ರಸ್ತೆ ಕಡೆಗಳಲ್ಲಿ ಪ್ರತಿನಿತ್ಯ ನಿಲುಗಡೆಗೊಳಿಸುವ ವಾಹನಗಳನ್ನು ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಒಳಗಡೆ ನಿಲುಗಡೆಗೊಳಿಸಬೇಕು.

ಮಡಿಕೇರಿ ನಗರದ ಒಳಭಾಗದಲ್ಲಿರುವ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇದಿಸಲಾಗಿದೆ. ತಾ. 19ರ ಮಧ್ಯಾಹ್ನ 2 ಗಂಟೆಯಿಂದ ತಾ. 20ರ ಬೆಳಿಗ್ಗೆ 10 ಗಂಟೆವರೆಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇದಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು. ಈ ಸಂದರ್ಭ ಡಿವೈಎಸ್ಪಿ ಸುಂದರ್‍ರಾಜ್ ಇದ್ದರು.