ಕುಶಾಲನಗರ, ಅ. 16: ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಗೆ ಒಟ್ಟು 66 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕುಶಾಲನಗರದ 16 ವಾರ್ಡ್‍ಗಳಿಗೆ 3 ರಾಜಕೀಯ ಪಕ್ಷಗಳು, ಎಸ್‍ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 68 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪಟ್ಟಣದ ಎಲ್ಲಾ ವಾರ್ಡ್‍ಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಎಸ್‍ಡಿಪಿಐ 2 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದೆ. ಪಕ್ಷದಲ್ಲಿ ಟಿಕೇಟ್ ದೊರೆಯದ ಬಹುತೇಕ ಆಕಾಂಕ್ಷಿಗಳು ಪಕ್ಷೇತರರಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿರುವದು ಕಂಡುಬಂದಿದೆ. 16 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡ ಸಂದರ್ಭ ಆಗಸ್ಟ್ ತಿಂಗಳಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಒಟ್ಟು 66 ಅಭ್ಯರ್ಥಿಗಳು 68 ನಾಮಪತ್ರಗಳು ಸಲ್ಲಿಕೆಯಾಗಿದೆ. ಚುನಾವಣಾಧಿಕಾರಿಗಳಾಗಿ ಪ್ರಮೋದ್ ಹಾಗೂ ವರದರಾಜು ಮತ್ತು ತಂಡ ಕಾರ್ಯನಿರ್ವಹಿಸಿದರು.16 ವಾರ್ಡ್‍ಗಳಿಗೆ 68 ನಾಮಪತ್ರ

(ಮೊದಲ ಪುಟದಿಂದ) ಕುಶಾಲನಗರಕ್ಕೆ ಭೇಟಿ ನೀಡಿದ ಕ್ಷೇತ್ರ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ಎಲ್ಲಾ ವಾರ್ಡ್‍ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಂಡಾಯ ಅಭ್ಯರ್ಥಿಗಳಾಗಿ ಕೆಲವು ಪಕ್ಷದ ಕಾರ್ಯಕರ್ತರು ಸ್ಪರ್ಧಿಸಿದ್ದು ಪಕ್ಷದ ಅಭ್ಯರ್ಥಿಗಳಿಗೆ ಯಾವದೇ ಅಡ್ಡಿಯುಂಟಾಗುವದಿಲ್ಲ ಎಂದಿದ್ದಾರೆ.

ಮಾಜಿ ಸಚಿವರು, ಜೆಡಿಎಸ್ ಪ್ರಮುಖರಾದ ಬಿ.ಎ.ಜೀವಿಜಯ ಅವರು ಕುಶಾಲನಗರಕ್ಕೆ ಭೇಟಿ ನೀಡಿ ಮಾತನಾಡಿ, ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಜಯಭಾರಿಸುವದು ಖಚಿತ ಎಂದು ಪ್ರತಿಕ್ರಿಯಿಸಿದ್ದಾರೆ.