ಮಡಿಕೇರಿ, ಅ. 16: ಜಾತಿ, ಆದಾಯ ಪತ್ರ ಸೇರಿದಂತೆ ಇತರ ಸರಕಾರದ ಅಧಿಕೃತ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ಕಂದಾಯ ಕಚೇರಿಗಳಲ್ಲಿ ‘ನೆಮ್ಮದಿ’ ಕೇಂದ್ರವನ್ನು ತೆರೆದಿದೆ. ಆದರೆ ಈ ಕೇಂದ್ರಗಳು ಜನರ ನೆಮ್ಮದಿ ಕೆಡಿಸುವ ಕೇಂದ್ರಗಳಾಗುತ್ತಿವೆ. ದಿನಗಟ್ಟಲೆ ಸಾಲುಗಟ್ಟಿ ನಿಂತರು ದಾಖಲೆಗಳು ಸಿಗುವದಿಲ್ಲ. ಪ್ರತಿನಿತ್ಯ ‘ಸರ್ವರ್ ಪ್ರಾಬ್ಲಮ್’ ಎಂಬ ಸಬೂಬು ಕೇಳಿಬರುತ್ತದೆ. ಇದೀಗ ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ಸಂತ್ರಸ್ತರಾಗಿ ದಾಖಲೆಗಳನ್ನು ಕಳೆದುಕೊಂಡಿದ್ದು, ದಾಖಲೆಗಳಿಗಾಗಿ ವಾರಗಟ್ಟಲೆ ಪರದಾಡುವ ಸ್ಥಿತಿ ಬಂದೊದಗಿದೆ.
ಇಂದೂ ಕೂಡ ಮಡಿಕೇರಿ ತಹಶೀಲ್ದಾರ್ ಕಚೇರಿ ಬಳಿ ಇರುವ ನೆಮ್ಮದಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ಮಹಿಳೆಯರಾದಿಯಾಗಿ ಸಾಲುಗಟ್ಟಿ ನಿಂತಿದ್ದು, ಸಂಜೆಯಾಗುತ್ತಲೆ ಅವರನ್ನು ‘ಇಂದು ಆಗುವದಿಲ್ಲ’ ಎಂದು ವಾಪಸ್ ಕಳುಹಿಸಲಾಗಿದೆ. ಕುಶಾಲನಗರ ಗಂಜಿ ಕೇಂದ್ರದಿಂದ ಬಂದಿದ್ದ ಅಯೆಶಾ, ಮುಕ್ಕೋಡ್ಲುವಿನ ದಿನೇಶ್ ಮತ್ತಿತರರು ಈ ಬಗ್ಗೆ ಕೇಂದ್ರ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಎದುರಾಯಿತು. ಸಂಜೆವರೆಗೆ ಕಾಯಿಸುವದಕ್ಕಿಂತ ಆಧಾರ್ ಕಾರ್ಡ್ಗೆ ನೀಡುತ್ತಿದ್ದ ಹಾಗೆ ‘ಟೋಕನ್’ ನೀಡಲಿ ಎಂದು ಹೇಳಿದರು. ಅಲ್ಲದೆ ಕೆಲವರು ಬಾಗಿಲ ಬಳಿ ಹೋಗಿ ಸಿಬ್ಬಂದಿಗಳಿಗೆ ಹಣ ನೀಡಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.