ಕುಶಾಲನಗರ, ಅ 16: ರೋಟರಿ ಇನ್ನರ್ ವೀಲ್ ಸಂಸ್ಥೆಗಳಿಂದ ಕೊಡಗು ಜಿಲ್ಲೆಯ ಸಂತ್ರಸ್ತರಿಗಾಗಿ ರೂ. 4 ಲಕ್ಷಗಳ ಧನ ಸಹಾಯ ವಿತರಿಸಲಾಗುವದು ಎಂದು ಇನ್ನರ್‍ವೀಲ್ ಕ್ಲಬ್‍ನ ಜಿಲ್ಲಾ ಅಧ್ಯಕ್ಷೆ ಡಾ. ಸಾರಿಕಾ ಪ್ರಸಾದ್ ತಿಳಿಸಿದರು.

ಕುಶಾಲನಗರದ ರೋಟರಿಯಲ್ಲಿ ನಡೆದ ಇನ್ನರ್ ವೀಲ್ ಕ್ಲಬ್‍ನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣ, ವಿಕಸನದ ಪ್ರಮುಖ ಧ್ಯೇಯದೊಂದಿಗೆ ಇನ್ನರ್‍ವೀಲ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ದೇಶದ ಅತಿ ದೊಡ್ಡ ಮಹಿಳಾ ಸ್ವಯಂ ಸೇವಾ ಸಂಸ್ಥೆಯಾಗಿರುವ ಇನ್ನರ್ ವೀಲ್ ಕ್ಲಬ್ ಹಲವು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು. ವಿಶ್ವದ 105 ದೇಶಗಳಲ್ಲಿರುವ ಕ್ಲಬ್‍ಗಳಲ್ಲಿ ಒಟ್ಟು 1 ಲಕ್ಷದ 40 ಸಾವಿರ ಸದಸ್ಯರನ್ನು ಹೊಂದಿದ್ದು ಭಾರತದಲ್ಲಿ 50 ಸಾವಿರದಷ್ಟು ಸದಸ್ಯರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಆರೋಗ್ಯ ಜಾಗೃತಿ, ಸ್ವಚ್ಛತೆ, ಕಸ ವಿಂಗಡಣೆ, ಸಮರ್ಪಕ ಕಸ ವಿಲೇವಾರಿ, ಪ್ಲಾಸ್ಟಿಕ್ ಬಳಕೆ ನಿಷೇಧಕ್ಕಾಗಿ ಹಲವು ಕಾರ್ಯಕ್ರಮ ಗಳನ್ನು ನಿರಂತರವಾಗಿ ಹಮ್ಮಿಕೊಳ್ಳ ಲಾಗುತ್ತಿದೆ ಎಂದರು. ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್ ಮಾತನಾಡಿ, ಕುಶಾಲನಗರ ಕ್ಲಬ್ ವತಿಯಿಂದ ಈಗಾಗಲೇ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ವಿತರಣೆ, ಪ್ರಕೃತಿ ವಿಕೋಪದ ಸಂದರ್ಭ ಸುಂಟಿಕೊಪ್ಪ, ಹಟ್ಟಿಹೊಳೆ ಶಾಲಾ ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆಗೆ ನೆರವು ನೀಡಲಾಗಿದೆ, ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಲ್ಲಿ ಆರೋಗ್ಯ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು ಇದೀಗ ಆಯ್ದ 12 ಮಂದಿ ಸಂತ್ರಸ್ತರಿಗೆ ಉಚಿತ ಗ್ಯಾಸ್ ಸ್ಟೌ, ಸೀರೆ ಗಳನ್ನು ವಿತರಣೆ ಮಾಡಲಾಗುವದು ಎಂದರು. ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷೆ ಅನುರಾಧ ನಂದ ಕುಮಾರ್, ನಿರ್ಗಮಿತ ಅಧ್ಯಕ್ಷೆ ವಿನಿತಾ ಸತೀಶ್, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸಂಧ್ಯಾ ಪ್ರಮೋದ್, ಖಜಾಂಚಿ ಎಸ್.ಜಿ. ತೇಜಸ್ವಿನಿ ಮತ್ತಿತರರು ಇದ್ದರು.