ಶನಿವಾರಸಂತೆ, ಅ. 15: ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 2 ಲಕ್ಷ ಮೌಲ್ಯದ ಮರದ ನಾಟಾಗಳನ್ನು ರೂ. 7 ಲಕ್ಷ ಮೌಲ್ಯದ ವಾಹನ ಸಹಿತ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್, ಸಿಬ್ಬಂದಿ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ ಘಟನೆ ಸಮೀಪದ ಹಿಪ್ಪಲಿ ಗೇಟ್ ಬಳಿ ಸೋಮವಾರ ನಡೆದಿದೆ.
ಹಾನುಬಾಳು ಗ್ರಾಮದ ಹೇಮಂತ್ ಹಾಗೂ ಈಚಲುಪುರ ಗ್ರಾಮದ ಡೀಲಾಕ್ಷ ಬಂಧಿತರು. ಇಬ್ಬರು ಬೆಳಗ್ಗಿನ ಜಾವ 4 ಗಂಟೆಗೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಹಾಡನಹಳ್ಳಿ ಗ್ರಾಮದ ರಜನಿಕಾಂತ್ ಅವರ ಕಾಫಿ ತೋಟದಿಂದ ಲಾರಿಯಲ್ಲಿ ಹವಳಿಗೆ, ಮಾವು, ಸಂಪಿಗೆ, ಕರಿಬಸರಿ ಮರದ ನಾಟಾಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದರು. ಶನಿವಾರಸಂತೆ ಮಾರ್ಗವಾಗಿ ಹಿಪ್ಪಲಿ ಗೇಟ್ ಮೂಲಕ ಹೊಳೆನರಸೀಪುರಕ್ಕೆ ಸಾಗಿಸುತ್ತಿದ್ದ ಖಚಿತ ಮಾಹಿತಿ ದೊರೆತ ಅನ್ವಯ ಅರಣ್ಯ ಇಲಾಖೆಯವರು ಧಾಳಿ ನಡೆಸಿದರು. ಪ್ರಕರಣ ದಾಖಲಿಸಿದ ನಂತರ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.
ಈ ಕಾರ್ಯಾಚರಣೆಯಲ್ಲಿ ಡಿ.ಎಫ್.ಓ. ಮಂಜುನಾಥ್ ಮತ್ತು ಎ.ಸಿ.ಎಫ್. ಚಿನ್ನಪ್ಪ ಅವರ ನಿರ್ದೇಶನದಂತೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಅರಣ್ಯ ರಕ್ಷಕರಾದ ಎ.ಆರ್. ಲೋಹಿತ್, ಡಿ.ಎಸ್. ಜಯಕುಮಾರ್ ಹಾಗೂ ವಿ.ಕೆ. ಹರೀಶ್ಚಂದ್ರ ಪಾಲ್ಗೊಂಡಿದ್ದರು.