ಕೂಡಿಗೆ, ಅ. 13: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರವು ದುರವಸ್ಥೆಯಿಂದ ಕೂಡಿದೆ. 24x7 ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯ ಸ್ಥಗಿತಗೊಂಡಿದೆ.
ಈ ಆರೋಗ್ಯ ಕೇಂದ್ರಕ್ಕೆ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಮರೂರು, ಹಳೆಗೋಟೆ, 6ನೇ ಹೊಸಕೋಟೆ, ಹುಲುಸೆ, ಕಣಿವೆ ಹಾಗೂ ಶಿರಂಗಾಲ, ತೊರೆನೂರು ಗ್ರಾಮಗಳ ಹಾಗೂ ಗಡಿಭಾಗದ ಜಿಲ್ಲೆಗಳಾದ ಹಾಸನ-ಮೈಸೂರು ಜಿಲ್ಲೆಯ ಗ್ರಾಮಗಳ ಜನರು ಬರುತ್ತಾರೆ.
ಈ ಕೇಂದ್ರದಲ್ಲಿ ಮಳೆ ಸುರಿದಾಗ ಮೇಲ್ಛಾವಣಿಯಿಂದ ಆಸ್ಪತ್ರೆಯೊಳಗೆ ನೀರು ಸುರಿಯುತ್ತದೆ. ಪ್ರಮುಖವಾಗಿ ಹೆರಿಗೆ ಕೇಂದ್ರದಲ್ಲಿಯೂ ಮಳೆಯ ನೀರು ಸುರಿದು ಮೇಲ್ಛಾವಣಿ ಬೀಳುವ ಹಂತದಲ್ಲಿರುವದರಿಂದ ಈಗಾಗಲೇ ಆಪರೇಷನ್ ಮತ್ತು ಹೆರಿಗೆ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆಯಲ್ಲಿ ಹೆರಿಗೆಯ ನಂತರ ಮಗು ಮತ್ತು ತಾಯಿಗೆ ಬೇಕಾಗುವ ಸೊಳ್ಳೆ ಪರದೆಗಳು ಸಹ ಇಲ್ಲವಾಗಿದೆ.
ಹೆಬ್ಬಾಲೆ ವ್ಯಾಪ್ತಿಯ ಗರ್ಭಿಣಿಯರು ವೈದ್ಯಕೀಯ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದಲ್ಲಿ ಕುಶಾಲನಗರ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹೆರಿಗೆ ಸಂದರ್ಭ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆಯನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಆಸ್ಪತ್ರೆಯ ಪ್ರಬಾರ ವೈದ್ಯಾಧಿಕಾರಿ ಡಾ. ರವಿಚಂದ್ರ ಅವರು ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆಸ್ಪತ್ರೆಯ ದುರಸ್ತಿ ಕಾರ್ಯದ ಬಗ್ಗೆ ಪ್ರಸ್ತಾವನೆ ಹೋಗಿದ್ದು, ಮುಂದಿನ ದಿನಗಳಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಕಾರ್ಯೋನ್ಮುಖರಾಗಿದ್ದಾರೆ ಎಂದರು. - ಕೆ.ಕೆ. ನಾಗರಾಜಶೆಟ್ಟಿ.