ಮಡಿಕೇರಿ, ಅ. 13: ತೂಕ್‍ಬೊಳಕ್ ಕಲೆ, ಸಾಹಿತ್ಯ, ಕ್ರೀಡಾ ಅಕಾಡೆಮಿ ವತಿಯಿಂದ ಕೊಡಗಿನ ಆದಿ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮದಿನೋತ್ಸವವನ್ನು ನ. 21 ರಂದು ವೀರಾಜಪೇಟೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಈ ಬಗ್ಗೆ ಮಾಹಿತಿ ನೀಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ತೂಕ್‍ಬೊಳಕ್ ಕಲೆ, ಸಾಹಿತ್ಯ, ಕ್ರೀಡಾ ಅಕಾಡೆಮಿ ವತಿಯಿಂದ ನಡೆಯಲಿದೆ ಎಂದು ತಿಳಿಸಿದರು.

ವೀರಾಜಪೇಟೆಯ ದೊಡ್ಡಟ್ಟಿ ಚೌಕಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ ಪ್ರತಿಮೆಗೆ ನವೆಂಬರ್ 21 ರಂದು ಬೆಳಿಗ್ಗೆ 8.30 ಗಂಟೆಗೆ ಗಣ್ಯರಿಂದ ಮಾಲಾರ್ಪಣೆ ಮಾಡಿ, ಬಳಿಕ ಗೋಣಿಕೊಪ್ಪ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿ ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಸಭಾ ಕಾರ್ಯ ಕ್ರಮವನ್ನು ಹಮ್ಮಿಕೊಂಡಿರುವದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಅಭಿಮಾನಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಂಕರಿ ಪೊನ್ನಪ್ಪ ಮನವಿ ಮಾಡಿದರು.

ಗೋಷ್ಠಿಯಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆಯ ಚೇರ್ ಪರ್ಸನ್ ಹಾಗೂ ತೂಕ್‍ಬೊಳಕ್ ಕಲೆ, ಸಾಹಿತ್ಯ, ಕ್ರೀಡೆ ಅಕಾಡೆಮಿಯ ನಿರ್ದೇಶಕಿ ಶಾಂತಿ ಅಚ್ಚಪ್ಪ, ನಿರ್ದೇಶಕರಾದ ಪುಲಿಯಂಡ ಪಿ. ಪೊನ್ನಪ್ಪ ಹಾಗೂ ಚುಮ್ಮಿ ಪೂವಯ್ಯ ಉಪಸ್ಥಿತರಿದ್ದರು.