ವರದಿ: ರಂಜಿತಾ ಕಾರ್ಯಪ್ಪ
ಮಡಿಕೇರಿ, ಅ. 13: ವಿಶ್ವದ 2ನೇ ಅತಿ ದೊಡ್ಡ ಹಾಗೂ ರಾಷ್ಟ್ರಕ್ಕೆ ಹೆಚ್ಚು ಆದಾಯ ತಂದುಕೊಡುತ್ತಿರುವ ಕಾಫಿ ಮತ್ತು ಮೆಣಸಿನ ಉದ್ಯಮವನ್ನು ನಂಬಿ ಬದುಕುತ್ತಿರುವ ಬೆಳೆಗಾರರು ಕೆಲ ದಶಕಗಳಿಂದ ಸಂಕಷ್ಟ ಎದುರಿಸುತ್ತಿದ್ದು ಇದೀಗ ಹಿಂದೆಂದೂ ಕೊಡಗಿನಲ್ಲಿ ಕಂಡು ಕೇಳರಿಯದ ರಣಭೀಕರ ಮಳೆಗೆ ತತ್ತರಿಸಿ ಹೋಗಿದ್ದು, ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಬೆಲೆಗಳಲ್ಲಿನ ವ್ಯತ್ಯಯ, ಕಾರ್ಮಿಕರ ಸಮಸ್ಯೆ, ಕೀಟಬಾಧೆ, ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರನಿಗೆ ಸಾಲ ನೀಡಿರುವ ಬ್ಯಾಂಕುಗಳಿಂದ ಸಾಲ ಮರುಪಾವತಿ ಮಾಡುವಂತೆ ಕಿರುಕುಳ, ಇವುಗಳಿಂದ ರೈತರು ಕೃಷಿಯನ್ನು ಬಿಟ್ಟು ಅತಂತ್ರ ಪರಿಸ್ಥಿತಿಗೆ ತಲಪುವ ಕಾಲ ಸನ್ನಿಹಿತವಾಗಿದೆ. ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆ 2017 -2018ನೇ ಸಾಲಿನ ಹವಾಮಾನದಲ್ಲಿನ ಏರುಪೇರು ಮತ್ತು ಬರಪರಿಸ್ಥಿತಿ ಕಾಫಿ ಬೆಳೆಗಾರರನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿಸಿದೆ.
ಭಾರತವು ಕರಿಮೆಣಸು ಉತ್ಪಾದನೆಯಲ್ಲಿ 3 ನೇ ಸ್ಥಾನದಲ್ಲಿದೆ. ಕಳೆದ ಬಾರಿಗಿಂತ ಈ ಬಾರಿ ಕಾಳುಮೆಣಸು ಬೆಳೆಯಲ್ಲಿ ಶೇ.80 ರಷ್ಟು ಇಳಿಕೆ ಕಂಡಿದೆ ಹಾಗೂ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಜೊತೆಗೆ ಮಳೆಯು ಹೆಚ್ಚಾಗಿದ್ದರಿಂದ ಕಾಫಿ ಬೆಳೆಗೆ ಮತ್ತು ಕಾಳು ಮೆಣಸಿಗೆ ಕೊಳೆರೋಗ ಬಾಧಿಸಿದೆ ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
ಉತ್ಪಾದನೆ ಕುಸಿತ : ಈ ವರ್ಷ ಕರ್ನಾಟಕ, ಕೇರಳ ಎರಡೂ ರಾಜ್ಯಗಳಲ್ಲಿ ಹವಾಮಾನ ವೈಪರಿತ್ಯದ ಪರಿಣಾಮ ಬೆಳೆಯ ಉತ್ಪಾದನೆ ತಗ್ಗಿದೆ. ಹೀಗಾಗಿ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕಾಗಿ ಏಪ್ರಿಲ್ ಮಧ್ಯ ಭಾಗದ ತನಕ ಕಾಯುವದು ಉತ್ತಮ. ರಂಜಾನ್, ದೀಪಾವಳಿ, ದಸರಾ ಸಂದರ್ಭದಲ್ಲೂ ಕಾಳು ಮೆಣಸಿಗೆ ದರ ಏರುತ್ತದೆ ಎನ್ನುತ್ತಾರೆ ಕೊಡಗಿನ ಬೆಳೆಗಾರರು.
ಮಿಶ್ರ ಪ್ರತಿಕ್ರಿಯೆ : ಕರ್ನಾಟಕ ಕಳೆದ 2014-15ರಲ್ಲಿ ಕಾಳುಮೆಣಸು ಉತ್ಪಾದನೆಯಲ್ಲಿ ನೆರೆಯ ಕೇರಳವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.40ಕ್ಕೂ ಹೆಚ್ಚು ಪಾಲನ್ನು ತನ್ನದಾಗಿಸಿತ್ತು. ಆ ಸಾಲಿನಲ್ಲಿ ದೇಶದಲ್ಲಿ ಒಟ್ಟು 70,000 ಟನ್ ಉತ್ಪಾದನೆಯಾಗಿದ್ದರೆ, ಕರ್ನಾಟಕದಲ್ಲಿ 33,000 ಟನ್ ಮತ್ತು ಕೇರಳದಲ್ಲಿ 28,000 ಟನ್ ಆಗಿತ್ತು. 2013-14ರಲ್ಲಿ ಕರ್ನಾಟಕದಲ್ಲಿ 16 ಸಾವಿರ ಟನ್ ಮತ್ತು ಕೇರಳದಲ್ಲಿ 20 ಸಾವಿರ ಟನ್ ಉತ್ಪಾದನೆಯಾಗಿತ್ತು.
ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರ ಸ್ಥಿತಿ ಶೊಚನೀಯವಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕಾಳುಮೆಣಸು ಉಪಬೆಳೆಯಾಗಿ ಬೆಳೆಯಲಾಗುತ್ತಿದ್ದರೆ, ಇನ್ನು ಕೆಲವೆಡೆ ಇದು ಪ್ರಮುಖ ಬೆಳೆಯೇ ಆಗಿದೆ. ಅಡಿಕೆ, ಏಲಕ್ಕಿ, ಬಾಳೆ, ತೆಂಗು ಬೆಳೆಗಳ ಜೊತೆಗೆ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ಆದರೆ ಹಲವು ವರ್ಷಗಳಿಂದ ಈ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ.
ಈ ಬಗ್ಗೆ ವ್ಯಾಪಾರಸ್ಥರನ್ನು ಕೇಳಿದರೆ ಮೆಣಸಿನ ಫಸಲು ಬಹಳ ಹೆಚ್ಚಾಗಿದೆ ಆದ್ದರಿಂದ ಮಾರುಕಟ್ತೆಯಲ್ಲಿ ಕೊಳ್ಳುವವರೇ ಇಲ್ಲ. ಹಾಗಾಗಿ ಮಾರುಕಟ್ಟೆ ಧಾರಣೆ ಕಡಿಮೆಯಾÁಗಿದೆ ಎಂಬ ಉತ್ತರ ನೀಡುತ್ತಾರೆ. ಅಲ್ಲದೇ ಕಾಳುಮೆಣಸಿನ ಬಹುದೊಡ್ಡ ಉತ್ಪಾದಕ ರಾಷ್ಟ್ರ ವಿಯೆಟ್ನಾಂ, ಇಂಡೋನೇಷ್ಯಾದಲ್ಲಿ ಈ ವರ್ಷ ಬಂಪರ್ ಫಸಲು ಬಂದಿದೆ. ವಿಯೆಟ್ನಾಂ ಈ ವರ್ಷ 55 ಸಾವಿರ ಟನ್ ಮೆಣಸು ಉತ್ಪಾದಿಸಿ ಶೇ. 83ರಷ್ಟನ್ನು ರಫ್ತು ಮಾಡುತ್ತಿದೆ. ಈ ಸಂಗತಿಯೂ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ.
ಅದೇನೇ ಇರಲಿ, ಸೊರಗು ರೋಗದ ಬಾಧೆಯಿಂದಾಗಿ ಹಲವು ಪ್ರದೇಶಗಳಲ್ಲಿ ಮೆಣಸಿನ ಫಸಲು ಕಡಿಮೆಯಾಗಿದೆ. ಆದರೆ ಕೆಲ ಪ್ರದೇಶಗಳಲ್ಲಿ ಫಸಲು ಉತ್ತಮವಾಗಿದೆ. ಹಲವು ವರ್ಷಗಳಿಂದ ಕೊಡಗು ಸೇರಿದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ ರೈತರು ಕಾಳುಮೆಣಸನ್ನು ತಮ್ಮ ತೋಟದಲ್ಲಿ ಬೆಳೆಯುತ್ತ ಬಂದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ರೈತರ ಪರಿಸ್ಥಿತಿಯ ಬಗ್ಗೆ ಕಿಂಚಿತ್ತೂ ಗಮನಹರಿಸುವವರಿಲ್ಲ. ಇದು ಈ ಬೆಳೆಗೆ ಮಾತ್ರವಲ್ಲ ಈ ಭಾಗದ ಹಲವು ಪ್ರಮುಖ ಬೆಳೆಗಳ ಬೆಲೆ ಸಂಪೂರ್ಣ ಕುಸಿದು ಹೋಗಿದ್ದು, ಇಲ್ಲಿನ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಮಾತ್ರವಲ್ಲ ಹಲವು ಬಾರಿ ಸರ್ಕಾರಕ್ಕೆ ಬೆಂಬಲ ಬೆಲೆಗಾಗಿ ಮನವಿಯನ್ನೂ ಮಾಡಿದ್ದಾರೆ. ಆದರೆ ಈವರೆಗೆ ಸರ್ಕಾರವಾಗಲಿ, ಸಂಬಂಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಯಾವದೇ ಗಮನ, ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದು ಈ ಭಾಗದ ರೈತರಿಗಾಗುತ್ತಿರುವ ಅನ್ಯಾಯ ಮಾತ್ರವಲ್ಲ. ಭಾರತದ ಬೆನ್ನೆಲುಬು ಎಂದೇ ಕರೆಯಲಾಗುವ ಮಣ್ಣಿನ ಮಕ್ಕಳಿಗಾಗುತ್ತಿರುವ ಸಂಕಟದ ಸ್ಥಿತಿ, ಅನ್ಯಾಯದ ಪರಮಾವಧಿ. ಇಲ್ಲಿನ ರೈತರ ಗೋಳು ಅರಣ್ಯ ರೋಧನವಾಗಿದೆ ಎಂದೇ ಹೇಳಬೇಕು. ಕಣ್ಮುಚ್ಚಿ ಕುಳಿತಿರುವ ಸರ್ಕಾರ ಈಗಲಾದರೂ ರೈತರ ಸಂಕಷ್ಟದ ಬಗ್ಗೆ ಗಮನ ಹರಿಸಿ, ಅನ್ನದಾತನ ಕೈ ಹಿಡಿಯಬೇಕಾಗಿದೆ.