ಕೂಡಿಗೆ, ಅ. 11: ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಈ ವ್ಯಾಪ್ತಿಯ ಮಹಿಳಾ ಗ್ರಾಮಸಭೆಯು ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅವರು ವಹಿಸಿದ್ದರು.
ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ, ಸ್ವಸಹಾಯ ಸಂಘ ಮತ್ತು ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಲು ಅನುಕೂಲವಾಗುವಂತೆ ಹೆಬ್ಬಾಲೆ ಯಲ್ಲಿ ಸ್ತ್ರೀಶಕ್ತಿ ಭವನವನ್ನು ನಿರ್ಮಿಸುವಂತೆ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳಾದ ಭವ್ಯಕುಮಾರಿ, ಸುಮಾ, ದೀಪ್ತಿ, ಜಯಮ್ಮ ಹಾಗೂ ಸಭೆಯಲ್ಲಿದ್ದ ಮಹಿಳೆಯರು ಒತ್ತಾಯಿಸಿದರು.
ಸಭೆಯಲ್ಲಿ ಅಂಗನವಾಡಿಗೆ ನೀರಿನ ಮತ್ತು ಶೌಚಾಲಯದ ವ್ಯವಸ್ಥೆಗಳನ್ನು ಹೆಚ್ಚುವರಿಯಾಗಿ ಮಾಡಿಕೊಡುವಂತೆ ಸಭೆಯ ಗಮನಕ್ಕೆ ತಂದರು. ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು ಮತ್ತು ಸ್ತ್ರೀಶಕ್ತಿ ಸಂಘದ ಮೇಲ್ವಿಚಾರಕರು ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸಭೆಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲತಾ ಅವರು ಮಾತನಾಡಿ, ಮಹಿಳೆಯರು ಸ್ವಾವಲಂಭಿ ಬದುಕು ಸಾಗಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಮಹಿಳೆ ಯರು ಸದ್ಬಳಕೆ ಮಾಡಿಕೊಳ್ಳಬೇಕು. ಸಭೆಯ ಗಮನಕ್ಕೆ ತಂದಿರುವ ವಿಷಯಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಕಾರ್ಯರೂಪಕ್ಕೆ ಬರುವಂತೆ ಮಾಡಲಾಗುವುದು ಎಂದರು. ಅಭಿವೃದ್ಧಿ ಅಧಿಕಾರಿ ರಾಕೇಶ್ ಮಾತನಾಡಿ, ಮಹಿಳೆಯರ ಗ್ರಾಮಸಭೆಯಲ್ಲಿ ಚರ್ಚಿತ ವಿಷಯಗಳನ್ನು ಹಾಗೂ ಸಮಸ್ಯೆಗಳನ್ನು ದಾಖಲಿಸಿಕೊಳ್ಳಲಾಗಿದೆ. ತುರ್ತಾಗಿ ಆಗಬೇಕಿರುವ ಕಾಮಗಾರಿಯನ್ನು ಪಂಚಾಯಿತಿ ಅನುದಾನದಲ್ಲಿ ಮಾಡಲಾಗುವುದು ಎಂದರು.
ನೋಡಲ್ ಅಧಿಕಾರಿಯಾಗಿ ಕೂಡಿಗೆ ಕೃಷಿ ಇಲಾಖೆಯ ಮಾಧವರಾವ್ ಇದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಚೇತನ್, ಸರೋಜಮ್ಮ, ಮಧುಸೂದನ್ ಮತ್ತಿತರರು ಇದ್ದರು.