ವೀರಾಜಪೇಟೆ, ಅ. 11: ಪ್ರತಿಯೊಬ್ಬರು ತಮ್ಮ ತಂದೆ ತಾಯಿಯನ್ನು ಕಡೆಗಣಿಸದೆ ಅವರ ಆರೋಗ್ಯ-ಯೋಗಕ್ಷೇಮವನ್ನು ನೋಡಿಕೊಳ್ಳುವದು ಮಕ್ಕಳ ಪ್ರಮುಖ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಅಭಿಪ್ರಾಯಪಟ್ಟರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಆಶ್ರಯದಲ್ಲಿ “ಹಿರಿಯ ನಾಗರಿಕರ ದಿನಾಚರಣೆ ಮತ್ತು ಮಾನಸಿಕ ಆರೋಗ್ಯ ದಿನಾಚರಣೆ''ಯ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ದೀಪ ಬೆಳಗಿಸುವದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶ ಜಯಪ್ರಕಾಶ್ ಅವರು ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಬ್ಯಾಸಕ್ಕಾಗಿ ಲಕ್ಷಾಂತರ ರೂಪಾಯಿ ನೀಡಿ ನಗರಗಳಿಗೆ ಕಳಿಸುತ್ತಾರೆ, ಮಕ್ಕಳು ವಿದ್ಯೆ ಕಲಿತು ದೊಡ್ಡವರಾದ ನಂತರ ಪೋಷಕರನ್ನೇ ಮರೆಯುವಂತಾಗಬಾರದು. ಕುಟುಂಬಗಳಲ್ಲಿ ಹಿರಿಯ ನಾಗರಿಕರಿಗೆ ಒತ್ತಡ ಕಂಡಾಗ ಅವರ ಆರೋಗ್ಯವನ್ನು ವಿಚಾರಿಸಿ ಅವರಿಗೆ ಚಿಕಿತ್ಸೆ ಕೊಡಿಸುವಂತಾಗಬೇಕು. ಹಿರಿಂiÀi ನಾಗರಿಕರಿಗಾಗಿ ಪ್ರತಿ ಜಿಲ್ಲೆಯಲ್ಲಿಯೂ ವೃದ್ಧಾಶ್ರಮವನ್ನು ತೆರೆಯುವಂತೆ ಆದೇಶವಿದೆ. ಕಾನೂನು ಸೇವೆಗಳ ಸಮಿತಿಯಿಂದ ಹಿರಿಯ ನಾಗರಿಕರಿಗೆ ಉಚಿತ ಕಾನೂನಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಮಾತನಾಡಿ, ಹಿರಿಯ ನಾಗರಿಕರು ಮಾನಸಿಕ ಅಸ್ವಸ್ಥರಾಗಿದ್ದರೆ ಅವರಿಗೆ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಬೇಗ ನ್ಯಾಯ ಒದಗಿಸಲಾಗುವದು ಮತ್ತು ಅವರ ಆರೋಗ್ಯದ ಬಗ್ಗೆ ವಿಚಾರಿಸಿ ನ್ಯಾಯಾಲಯದ ಮೂಲಕ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆಯನ್ನು ಮಾಡಲಾಗುವದು. ಪ್ರತಿಯೊಬ್ಬರು ಹಿರಿಯರನ್ನು ಗೌರವದಿಂದ ಕಾಣುವಂತಾಗಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರನ್ನು ಕಡೆಗಣಿಸದೆ ಅವರಿಗೆ ವಿಶ್ವಸದಿಂದ ಪ್ರತಿಯೊಬ್ಬರು ಗೌರವಿಸಬೇಕು ಎಂದರು. ವೇದಿಕೆಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಜಿ. ಕಾಮತ್ ಉಪಸ್ಥಿತರಿದ್ದರು. ಎಸ್.ಡಿ. ಮಂಜುನಾಥ್ ಸ್ವಾಗತಿಸಿ, ನಿರೂಪಿಸಿದರು. ಎ.ಜೆ. ಪ್ರದೀಪ್ ವಂದಿಸಿದರು.