ಮಡಿಕೇರಿ, ಅ. 10: ಬಾಳೆಲೆ ಸನಿಹದ ನಿಟ್ಟೂರು ಕಾರ್ಮಾಡು ವಿಭಾಗದಲ್ಲಿ ಶ್ರೀಗಂಧದ ಮರ ಕಳವು ಯತ್ನ ಮತ್ತೆ ಮುಂದುವರಿದಿದೆ. ಈ ಹಿಂದೆ ಇಲ್ಲಿನ ಅರಣ್ಯ ತಪಾಸಣಾ ಗೇಟ್ ಸನಿಹವೇ ಕಳ್ಳರು ಮರವೊಂದನ್ನು ಕಡಿದು ಅದನ್ನು ಕೊಂಡೊಯ್ಯಲು ಸಾಧ್ಯವಾಗದೆ ಬಿಟ್ಟು ಹೋಗಿದ್ದರು.

ಇದೀಗ ಕಳೆದ ರಾತ್ರಿಯೂ ಇದೇ ರೀತಿಯ ಪ್ರಕರಣವೊಂದು ನಡೆದಿದೆ. ಅಲ್ಲಿನ ಕೆ. ಚಿಟ್ಟಿಯಪ್ಪ ಎಂಬವರ ತೋಟದ ಸನಿಹದ ಮುಖ್ಯ ರಸ್ತೆ ಬದಿಯಲ್ಲಿ ಕಳೆದ ರಾತ್ರಿ ಶ್ರೀಗಂಧದ ಮರವನ್ನು ಕಡಿಯಲಾಗಿದೆ. ಆದರೆ, ಮರವನ್ನು ಅಪಹರಿಸಲು ಸಾಧ್ಯವಾಗದೆ ಕಳ್ಳರು ಅದನ್ನು ಬಿಟ್ಟು ತೆರಳಿದ್ದಾರೆ.

ಗ್ರಾಮದ ಅಂಚಿನಲ್ಲಿರುವ ರಕ್ಷಿತಾರಣ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಮರ ಸಾಗಾಣಿಕೆ ಹಾಗೂ ವನ್ಯ ಪ್ರಾಣಿಗಳ ಹತ್ಯೆ ಯತ್ನದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನಿಟ್ಟೂರು ಗ್ರಾಮ ಸಭೆಯಲ್ಲೂ ವಿಚಾರ ಪ್ರಸ್ತಾಪಗೊಂಡಿತ್ತು. ಆದರೂ ಇಂತಹ ಘಟನೆಗಳು ಮರುಕಳಿಸುತ್ತಿರುವದು ಕಂಡುಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.