ಮಡಿಕೇರಿ, ಅ. 9: ನಗರದ ಸ್ಟೋನ್‍ಹಿಲ್ ಪಕ್ಕದ ಬೆಟ್ಟ ಸಾಲಿನಲ್ಲಿ ರಾಶಿ ರಾಶಿ ಕಸದ ಕೊಂಪೆಯಿಂದಾಗಿ ಸುಬ್ರಹ್ಮಣ್ಯ ನಗರ, ರೈಫಲ್‍ರೇಂಜ್, ಡಿಎಆರ್ ವಸತಿ ಸಹಿತ ಪೊಲೀಸ್ ಕುಟುಂಬಗಳ ಜನವಸತಿಯಲ್ಲಿ ಬದುಕಿಗೆ ಸಂಚಕಾರದೊಂದಿಗೆ, ನಗರಸಭೆಯು ಲೋಕಾಯುಕ್ತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ ಎಂದು ಇಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆತಂಕ ಕೇಳಿ ಬಂತು.ವಿಷಯ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪಿ.ಡಿ. ಪೊನ್ನಪ್ಪ, ತಾನು ಜನವಸತಿ ಪ್ರದೇಶಗಳಿಗೆ ತೆರಳಿದಾಗ, ಅಲ್ಲಿನ ನಿವಾಸಿಗಳು ಈ ಕಸದ ಕೊಂಪೆಯಿಂದ ದುರ್ವಾಸನೆಯೊಂದಿಗೆ ವಿಪರೀತ ನೊಣಗಳು ಉತ್ಪತ್ತಿಯಾಗಿ, ಯಾರೊಬ್ಬರೂ ತಮ್ಮ ಮನೆಗಳಲ್ಲಿ ಮೀನು ಇತ್ಯಾದಿ ಕರಿಯಲು ಸಾಧ್ಯವಾಗದಷ್ಟು ನೊಣಗಳ ಹಾವಳಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾಗಿ ಗಮನ ಸೆಳೆದರು.ಈ ಬಗ್ಗೆ ಸದಸ್ಯರುಗಳಾದ ಚುಮ್ಮಿ ದೇವಯ್ಯ, ಕೆ.ಎಸ್. ರಮೇಶ್, ಅನಿತಾ ಮತ್ತಿತರರು ದನಿಗೂಡಿಸಿ, ಈಚೆಗೆ ಮಡಿಕೇರಿಗೆ

(ಮೊದಲ ಪುಟದಿಂದ) ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿಗಳು; ಕಸದಿಂದ ತೊಂದರೆ ಅನುಭವಿಸುತ್ತಿರುವ ನಾಗರಿಕರಿಂದ ನಗರಸಭೆ ವಿರುದ್ಧ ದೂರು ದಾಖಲಿಸಿದರೆ, ಸೂಕ್ತ ಕ್ರಮಕೈಗೊಳ್ಳುವದಾಗಿ ಮೌಖಿಕ ಸೂಚನೆ ನೀಡಿರುವ ಅಂಶವನ್ನು ಬೊಟ್ಟು ಮಾಡಿದರು.

ಅಲ್ಲದೆ ಮಡಿಕೇರಿ ಬೆಟ್ಟ ಸಾಲಿನ ನಡುವೆ ಒಂದೆಡೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ ಗಮನ ಸೆಳೆದರೆ, ಇನ್ನೊಂದು ದಿಕ್ಕಿನಲ್ಲಿ ಕಸದ ರಾಶಿ ಈ ನಗರಕ್ಕೆ ಕಳಂಕವಾಗಿ ಪರಿಣಮಿಸಿದೆ ಎಂದು ಪೌರಾಡಳಿತ ವಿರುದ್ಧ ಮಾತಿನ ಚಾಟಿ ಬೀಸಿದ ಸದಸ್ಯರು, ಸೂಕ್ತ ವ್ಯವಸ್ಥೆಯೊಂದಿಗೆ ಮಾಲಿನ್ಯ ತಡೆಗೆ ಆಗ್ರಹಿಸಿದರು.

ಹಣ ತಡೆಹಿಡಿಯಲು ಪಟ್ಟು : ಕಳೆದ ಮಾರ್ಚ್‍ನಲ್ಲಿ ತರಾತುರಿಯಲ್ಲಿ ನೂತನ ಖಾಸಗಿ ಬಸ್‍ನಿಲ್ದಾಣ, ಮಾರುಕಟ್ಟೆ ಸಂಕೀರ್ಣ ಉದ್ಘಾಟನೆ ಬಾಬ್ತು ರೂ. 1,18,580 ಮೊತ್ತದ ಬೃಹತ್ ಖರ್ಚನ್ನು ಕೇವಲ ಅಲಂಕಾರಕ್ಕಾಗಿ ತೋರಿಸಲಾಗಿದೆ ಎಂಬ ಆಕ್ರೋಶ ಸದಸ್ಯರಿಂದ ವ್ಯಕ್ತಗೊಂಡು, ಈ ಹಣ ಪಾವತಿಸದೆ ತಡೆ ಹಿಡಿಯುವಂತೆ ಆಗ್ರಹಿಸಲಾಯಿತು.

ನಗರಸಭಾ ಅಧ್ಯಕ್ಷರಿಗೆ ಹಣ ಪಾವತಿಸಲು ಇರುವ ಕಾಳಜಿ, ಕಾಮಗಾರಿ ನಿರ್ವಹಿಸಲು ಇರುವದಿಲ್ಲವೆಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅಣಕವಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನಿಕೃಷ್ಣ ಮಾತನಾಡಿ, ತರಾತುರಿಯ ತೀರ್ಮಾನದಿಂದ ಸಿಬ್ಬಂದಿ ಇಂದು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದ್ದು, ಖಾಸಗಿ ನಿಲ್ದಾಣ ಹಾಗೂ ಮಾರುಕಟ್ಟೆ ಕೆಲಸಕ್ಕೆ ಸಭೆಯ ಒಪ್ಪಿಗೆ ಪಡೆಯದೆ ಕೋಟಿ ಹಣ ಪಾವತಿಸಿರುವಾಗ, ಕೇವಲ ಒಂದು ಲಕ್ಷಕ್ಕೆ ನಾವೇಕೆ ಬೊಬ್ಬೆ ಹೊಡೆಯಬೇಕೆಂದು ಮಾತಿನ ಚಾಟಿ ಬೀಸಿದರು.

ಒಟ್ಟಿನಲ್ಲಿ ಹಲವು ಗೊಂದಲ, ಗಲಾಟೆಗಳ ನಡುವೆ ಇಂದಿನ ಸಭೆಯಲ್ಲಿ ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಸಹಿತ ಅನೇಕ ಖರ್ಚುಗಳ ಲೆಕ್ಕ ಮಂಡಿಸಿ ಒಪ್ಪಿಗೆ ಪಡೆಯುವದರೊಂದಿಗೆ, ದಸರಾ ನಾಡಹಬ್ಬದ ಬಳಿಕ ತುರ್ತು ಸಭೆ ನಡೆಸಿ ನಗರದ ಪ್ರಮುಖ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಅಗತ್ಯ ಕಾಳಜಿ ವಹಿಸಲು ಸಭೆ ತೀರ್ಮಾನ ತೆಗೆದುಕೊಂಡಿತು.