ಗೋಣಿಕೊಪ್ಪ ವರದಿ, ಅ. 11 : ಈ ಬಾರಿ ಗೋಣಿಕೊಪ್ಪ ದಸರಾದ ವಿವಿಧ ಕಾರ್ಯಕ್ರಮಗಳು ಕೇವಲ ಸರಳ ಕಾರ್ಯಕ್ರಮವಾಗಿ ತಾ. 15 ರಿಂದ ಆರಂಭಗೊಳ್ಳಲಿದೆ ಎಂದು ಕಾವೆರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು.
ತಾ. 15 ರಂದು ಮಕ್ಕಳ ದಸರಾ ಆಚರಣೆ ಮೂಲಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. 16 ರಂದು ಮಹಿಳಾ ದಸರಾ, 17 ರಂದು ಸಾಂಸ್ಕøತಿಕ ಕಾರ್ಯಕ್ರಮ, 18 ರಂದು ಯುವ ದಸರಾ, 19 ರಂದು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾ. 18 ಹಾಗೂ 19 ರಂದು ಬಸ್ ನಿಲ್ದಾಣದ ಎದುರು ಕಾರ್ಯಕ್ರಮ ನಡೆಯಲಿದೆ. ಉಳಿದಂತೆ ಎಲ್ಲಾ ಕಾರ್ಯಕ್ರಮಗಳು ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿನ ಕಾವೇರಿ ಕಲಾವೇದಿಕೆಯಲ್ಲಿ ನಡೆಯಲಿದೆ.
ತಾ. 15 ರಂದು ನಡೆಯುವ ಮಕ್ಕಳ ದಸರಾದಲ್ಲಿ ಬೆ. 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. 1 ರಿಂದ 7 ಹಾಗೂ 8-10 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಚೆಸ್ ಪಂದ್ಯಾಟ ನಡೆಯಲಿದೆ. 1-10 ನೇ ತರಗತಿವರೆಗೆ ಮಕ್ಕಳ ಸಂತೆ ನಡೆಯಲಿದೆ. 8-10 ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ, 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ 6 ಜನರ ಮೇಲ್ಪಟ್ಟ ತಂಡದ ಜಾನಪದ ಗೀತೆ, 1-10 ನೇ ತರಗತಿ ವರೆಗೆ ಚಿತ್ರಕಲೆ ವೈಯಕ್ತಿಕ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 7 ರಿಂದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೌರಾಣಿಕ ಹಿನ್ನೆಲೆಯ ಛದ್ಮವೇಷ, ಪಾಶ್ಚಿಮಾತ್ಯ ಸಾಮೂಹಿಕ ನೃತ್ಯ, ನಂತರ ಸುಳ್ಯದ ಕಿರುತೆರೆ ಕಲಾವಿದ ಪಟ್ಟಾಭಿರಾಮರಿಂದ ಮಿಮಿಕ್ರಿ, ಶ್ಯಾಡೋ ಪ್ಲೇ ಮಕ್ಕಳಿಗಾಗಿ ಆಯೋಜನೆಗೊಂಡಿದೆ.
ತಾ. 16 ರಂದು ನಡೆಯುವ ಮಹಿಳಾ ದಸರಾದಲ್ಲಿ ಸಂಜೆ 6 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕೊಡಗಿನ ಪ್ರಾಕೃತಿಕ ಸಂಪತ್ತು ಉಳಿಸಿ ಪೋಷಿಸಲು ಕೊಡಗು ಪರಿಸರ ರಕ್ಷಣೆಯಲ್ಲಿ ನಮ್ಮ ಪಾತ್ರ ಅಂದು-ಇಂದು ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ. 4 ಜನರಿಗಿಂತ ಮೇಲ್ಪಟ್ಟ ತಂಡಕ್ಕೆ ನೃತ್ಯ ಸ್ಪರ್ಧೆ, ಜಾನಪದ ಗೀತೆ, ಮಿಸಸ್ ಗೋಣಿಕೊಪ್ಪ, ಛದ್ಮವೇಷ, ಸೀರೆ ನಿಖರ ಬೆಲೆ, ಪಿಕ್ ಅಯಿಂಡ್ ಅಕ್ಟ್ ಸ್ಪರ್ಧೆ ನಡೆಯಲಿದೆ.
ತಾ. 17 ರಂದು ಸಂಜೆ 7 ರಿಂದ ಜಗನ್ಮೋಹನ ನಾಟ್ಯಾಲಯ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ, ರಮೇಶ್ ತಂಡದಿಂದ ನೃತ್ಯ ನಡೆಯಲಿದೆ.
ತಾ. 18 ರಂದು ಬಸ್ ನಿಲ್ದಾಣ ಎದುರು ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಯುವ ಸಮೂಹದಿಂದ ಹಲವು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ತಾ. 19 ರಂದು ಸಂಗೀತ ರಸಮಂಜರಿ ಸಂಜೆ ನಡೆಯಲಿದೆ. ಈ ಸಂದರ್ಭ ಮಂಟಪಗಳ ಶೋಭಾ ಯಾತ್ರೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾದುಹೋಗಲಿದೆ.
ಜನರ ಸಲಹೆಯಂತೆ ಸರಳ ದಸರಾವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚು ವಿಜೃಂಬಣೆ ಬೇಡ ಎಂಬ ಕಾರಣಕ್ಕೆ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜಯದಶಮಿ ಯಂದು ಮಂಟಪ ಸಮಿತಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇವಿ ವಿಸರ್ಜನೆಗೆ ವಿಶೇಷ ಮೆರಗು ನೀಡಲಿವೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಬಿ. ಎನ್. ಪ್ರಕಾಶ್, ಖಜಾಂಜಿ ಧ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ. ಮಂಜುಳ ಉಪಸ್ಥಿತರಿದ್ದರು.