ಮೂರ್ನಾಡು, ಅ. 10 : ಕೊಯವ ಸಮಾಜದ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಅರಣ್ಯಾಧಿಕಾರಿ ಮುಕ್ಕಾಟಿರ ಅಪ್ಪಾಜಿ ಉದ್ಘಾಟಿಸಿದರು. ಅಧ್ಯಕ್ಷ ದಾದು ಮಾದಪ್ಪ ಮಾತನಾಡಿ, ಜಾತಿ ವಿಚಾರ ಬಂದಾಗ ಜಾತಿ ಹೇಳಿಕೊಳ್ಳುವದರಲ್ಲಿ ಹಿಂಜರಿಕೆ ಮಾಡಬಾರದು. ನಮ್ಮ ಜನಾಂಗ ಪ್ರವರ್ಗ 2ಎ ಬರುವದರಿಂದ ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಪಡೆಯುವವರು ಹೆಚ್ಚಾಗಿ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ತಿಳಿಸಿದರು.

ಸಮಾಜದ ಉಪಾಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, 1996ರಲ್ಲಿ ಸಮಾಜ ಸ್ಥಾಪನೆ ಮಾಡಿದಂತಹ ಹಿರಿಯರನ್ನು ಸ್ಮರಿಸಿ, ಹಿರಿಯರು ಸ್ಥಾಪಿಸಿದ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸಿಕೊಂಡು ಸಾಗುವದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ತಿಳಿಸಿ ಜನಾಂಗದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಹಾಗೂ ವೃತ್ತಿಪರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಪ್ರಸಂಶನಾ ಪತ್ರವನ್ನು ನೀಡಲಾಯಿತು. ಸಭೆಯಲ್ಲಿ ಮರಣ ಪಟ್ಟ ಸದಸ್ಯರಿಗೆ, ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಮರಣ ಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ಕಳೆದ ಸಾಲಿನ ಖರ್ಚಿನ ವಿವರ, ವರದಿಗಳನ್ನು ಮಂಡಿಸಲಾಯಿತು.

ಜಿಲ್ಲಂಡ ದಾದು ಮಾದಪ್ಪ, ಡಾ. ಮೇಚಿರ ಸುಭಾಷ್ ನಾಣಯ್ಯ, ತೋರೇರ ಕಾರ್ಯಪ್ಪ, ಈರಮಂಡ ವಿಜಯ, ಮುಕ್ಕಾಟಿರ ಹ್ಯಾರಿ ಪೂಣಚ್ಚ, ಮಲ್ಲಂಡ ಮಹೇಶ್, ಕಳ್ಳಿರ ನಾಣಯ್ಯ, ಮೇಚಿರ ಹರೀಶ್, ಸುಳ್ಳೆರ ಸೋಮಯ್ಯ, ಚೋಕಿರ ಡಾಲ, ಮಹಿಳಾ ನಿರ್ದೇಶಕರಾಗಿ ಮೇಚುರ ಮಮತ ಲೋಕೇಶ್, ಅಚ್ಚಪಂಡ ಧರ್ಮಾವತಿ ಕುಶಾಲಪ್ಪ, ನೇಂದುಮಂಡ ಗೀತಾ ನಾಣಯ್ಯ, ಈರಮಂಡ ದಮಯಂತಿ ತಿಮ್ಮಯ್ಯ, ಚೋಕಿರ ವನಿತ ವಿಜಯ, ಗೌರವ ಸಲಹೆಗಾರರಾಗಿ ಈರಮಂಡ ಸೋಮಣ್ಣ, ಅಚ್ಚಪಂಡ ಚಂಗಪ್ಪ, ನೇಂದುಮಂಡ ಮಾದಯ್ಯ, ಸುಳ್ಳೆರ ಯಶೋಧ, ನಾಯಮಂಡ ದೇವಕ್ಕಿ ಅವರುಗಳನ್ನು 2018 ರಿಂದ 2023ರವರೆಗಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.