ಗೋಣಿಕೊಪ್ಪಲು, ಅ. 10: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾನೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಇಂದು ನಡೆಯಬೇಕಿದ್ದು, ಹಲವು ಇಲಾಖಾಧಿಕಾರಿಗಳ ಗೈರು ಹಾಗೂ ಪ್ರತಿಭಟನೆ ನಡುವೆ ಗ್ರಾಮಸಭೆ ರದ್ದಾಗಿದೆ.

ಗ್ರಾ.ಪಂ. ಅಧ್ಯಕ್ಷೆ ಬಿ.ಸಿ.ಲತಾಕುಮಾರಿ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 11 ಗಂಟೆಗೆ ಗ್ರಾಮಸಭೆ ಆರಂಭಗೊಂಡಿತು. ಈ ಹಂತದಲ್ಲಿ ಹಲವು ಅಧಿಕಾರಿಗಳ ಗೈರು ಹಿನ್ನೆಲೆ ಕಾನೂರಿನ ರಾಜೀವ್‍ಬೋಪಯ್ಯ, ಕೆ.ನರೇಂದ್ರ,ಪೆÇೀರಂಗಡ ಬೋಪಣ್ಣ, ಈಶ್‍ಬೆಳ್ಳಿಯಪ್ಪ,ಕಾಡ್ಯಮಾಡ ಮಧು ಮುಂತಾದವರು ಸಭೆಯಲ್ಲಿ ಪ್ರಾರ್ಥನೆ, ಸ್ವಾಗತ ಹಾಗೂ ಜಿಲ್ಲೆಯ ಜಲಪ್ರಳಯ ಮತ್ತು ಕಾನೂರು ವ್ಯಾಪ್ತಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸುವ ಮುನ್ನವೇ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಗ್ರಾಮ ಸಭೆಯನ್ನು ಮುಂದೂಡಲಾಯಿತು.

ಇದೇ ಸಂದರ್ಭ ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ಅವರೂ ಪ್ರತಿಭಟನಾ ನಿರತರ ಪರವಾಗಿ ಧ್ವನಿಗೂಡಿಸಿ, ತಾನು ಸುಮಾರು 43 ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದು,

ಅತಿವೃಷ್ಟಿಯ ಸಂದರ್ಭ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಬೇಕಾದ ಅಧಿಕಾರಿಗಳು ಇಲ್ಲದ ಮೇಲೆ ಗ್ರಾಮ ಸಭೆ ನಡೆಸಿ ಏನು ಪ್ರಯೋಜನ? ಈ ಬಗ್ಗೆ ಜಿ.ಪಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆಯಲಾಗುವದು ಎಂದು ಹೇಳಿ ಸಭೆಯಿಂದ ಹೊರನಡೆದರು.

ಅಧ್ಯಕ್ಷೆ ಲತಾಕುಮಾರಿ, ಪಿಡಿಓ ಹೆಚ್.ಟಿ.ಪ್ರಭಾಕರ್ ಅವರು ಪ್ರಾರ್ಥನೆ, ಸ್ವಾಗತ ಭಾಷಣಕ್ಕೆ ಅನುವು ಮಾಡಿಕೊಡಲು ಮನವಿ ಮಾಡಿದರೂ, ಪ್ರತಿಭಟನಾ ನಿರತರು ವಿರೋಧ ವ್ಯಕ್ತಪಡಿಸಿದರು. ಈ ಹಂತದಲ್ಲಿ ಸದಸ್ಯ ಕೆ.ಆರ್.ಸುರೇಶ್ ಅವರು, ಗ್ರಾಮಸಭೆಗೆ ಅಧಿಕಾರಿಗಳೇ ಮುಖ್ಯವಲ್ಲ. ಇಂದು ಗ್ರಾಮದ ಸಮಸ್ಯೆಗಳನ್ನು ಆಲಿಸುವ. ಮುಂದೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆಯುವ ಎಂದು ಹೇಳಿದಾಗಲೂ ಸುಮ್ಮನಾಗದ ಪ್ರತಿಭಟನಾ ನಿರತರು ಗ್ರಾಮಸಭೆಗೆ ಧಿಕ್ಕಾರ ಕೂಗುತ್ತಾ, ನೆರೆದಿದ್ದ ಗ್ರಾಮಸ್ಥರನ್ನೂ ಎಬ್ಬಿಸುತ್ತಾ ಹೊರನಡೆದರು. ಈ ಹಂತದಲ್ಲಿ ಬೇಸರಗೊಂಡ ಗ್ರಾ.ಪಂ.ಅಧ್ಯಕ್ಷೆ ಲತಾಕುಮಾರಿ ಅವರು ಇಂದಿನ ಗ್ರಾಮ ಸಭೆಯನ್ನು ಬರಾಕಾಸ್ತು ಮಾಡಲಾಗಿದೆ ಎಂದು ಘೋಷಣೆ ಮಾಡುವ ಮೂಲಕ ಸಭೆ ರದ್ದುಗೊಂಡಿತು.

ಸಭೆಯಲ್ಲಿ ನೋಡೆಲ್ ಅಧಿಕಾರಿ ಪಶುವೈದ್ಯರಾದ ಡಾ.ಚಂದ್ರಶೇಖರ್, ತಾ.ಪಂ.ಸದಸ್ಯ ವೈ.ಎಂ.ಪ್ರಕಾಶ್, ಎಪಿಎಂಸಿ ಸದಸ್ಯ ಸುಜಾಪೂಣಚ್ಚ, ಗ್ರಾ.ಪಂ.ಉಪಾಧ್ಯಕ್ಷೆ ಹೆಚ್.ಎ.ಗೀತಾ, ಕೆಲವು ಇಲಾಖಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಸಭೆಯಲ್ಲಿ ಸುಮಾರು ನೂರಕ್ಕೂ ಅಧಿಕ ಗ್ರಾಮಸ್ಥರಿದ್ದರು.

ಇದೇ ಸಂದರ್ಭ ಪ್ರತಿಭಟನಾಕಾರರು ಗ್ರಾಮಸಭೆಯ ನಿಯಮಾವಳಿಯನ್ನು ಪಿಡಿಓಗೆ ಓದಿ ಹೇಳಲು ಮನವಿ ಮಾಡಿದರು. ಈ ಹಂತದಲ್ಲಿ ‘ಗ್ರಾಮಸಭೆಯು ಮುಖ್ಯವಾಗಿ ದುರ್ಬಲ ವರ್ಗದವರಿಗಾಗಿ’ ಎಂದು ಪಿಡಿಓ ಹೇಳುತ್ತಿದ್ದ ಸಂದರ್ಭ ಮತ್ತೆ ಪ್ರತಿಭಟನಾ ನಿರತರು ಆಕ್ಷೇಪಣೆ ವ್ಯಕ್ತಪಡಿಸಿದರು ಮತ್ತು ಪಂಚಾಯತ್ ರಾಜ್ ನಿಯಮಾವಳಿ ಪುಸ್ತಕವನ್ನು ಸಭೆಗೆ ತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಧಿಕ್ಕಾರ ಕೂಗುತ್ತಾ ಹೊರನಡೆದ ಘಟನೆ ನಡೆಯಿತು.

ಗ್ರಾ.ಪಂ.ಉತ್ತಮ ಕೆಲಸ ಮಾಡಿದೆ

ಕಾನೂರು ಗ್ರಾ.ಪಂ.ಯು ಲತಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಎಲ್ಲ ವಾರ್ಡ್‍ಗಳಲ್ಲಿಯೂ ಉತ್ತಮ ಕೆಲಸ ಮಾಡಿದೆ. ಇಂದಿನ ಗ್ರಾಮ ಸಭೆ ರದ್ಧತಿ ಅಧಿಕಾರಿಗಳ ಗೈರು ಹಾಜರಿಯಿಂದಲೇ ಹೊರತು ಗ್ರಾ.ಪಂ.ವಿರುದ್ಧವಾಗಿ ಅಲ್ಲ ಎಂದು ಬಳಿಕ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಕೆ.ಆರ್.ಸುರೇಶ್ ಪ್ರತಿಕ್ರಿಯೆ ನೀಡಿದರು. ಆದರೆ, ಕೊನೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸಭೆಗೆ ಕೆಲವರು ಧಿಕ್ಕಾರ ಕೂಗಿರುವದು ಅಕ್ಷಮ್ಯ ಮತ್ತು ಖಂಡನೀಯ ಎಂದು ನುಡಿದರು. ಇದೇ ಸಂದರ್ಭ ಮಾತನಾಡಿದ ಸದಸ್ಯ ಕಾಡ್ಯಮಾಡ ಬೋಪಣ್ಣ ಅವರು ಇಂದು ಅಧಿಕಾರಿಗಳ ಗೈರು ಹಾಜರಿ ನಡುವೆ ಸಭೆ ನಡೆಸಲು ಅವಕಾಶವಿತ್ತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಸಹಿಸದೆ ಕೆಲವರು ಪೂರ್ವಯೋಜಿತವಾಗಿ, ಉದ್ದೇಶಪೂರ್ವಕವಾಗಿ ರದ್ದತಿಗೆ ಕಾರಣರಾಗಿದ್ದಾರೆ. ಪ್ರಾರ್ಥನೆ, ಸ್ವಾಗತ ಹಾಗೂ ಅಗಲಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಂತರ ಗ್ರಾಮ ಸಭೆ ಮುಂದೂಡಲು ಅವಕಾಶ ಇತ್ತು. ಇದನ್ನು ತಾವು ಖಂಡಿಸುವದಾಗಿ ಹೇಳಿದರು.

ಇದೇ ಸಂದರ್ಭ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ಅವರು, ತಾನು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದು ಗ್ರಾಮಸಭೆಯ ನಿಯಮಾವಳಿಗಳನ್ನು ವಿವರಿಸಲು ಪ್ರತಿಭಟನಾ ನಿರತರು ಅವಕಾಶ ನೀಡಲಿಲ್ಲ. ಎಲ್ಲ ಇಲಾಖೆಯ ಅಧಿಕಾರಿಗಳಿಗೂ ವಾರದ ಮೊದಲೇ ಪತ್ರ ರವಾನೆಯಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆ ಸಂತ್ರಸ್ತರ ಮೇಲ್ವಿಚಾರಣೆಗಾಗಿ ಹಲವು ಅಧಿಕಾರಿಗಳನ್ನು ವಿವಿಧೆಡೆ ನಿಯೋಜಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಹಲವು ಅಧಿಕಾರಿಗಳು ಗೈರುಹಾಜರಾಗಿರಬಹುದು. ಇಲ್ಲಿ ಗ್ರಾ.ಪಂ.ಯಿಂದ ಯಾವದೇ ಪ್ರಮಾದವಾಗಿಲ್ಲ. ಗ್ರಾಮಸಭೆಯನ್ನು ನಡೆಸಲು ಅವಕಾಶವಿತ್ತು ಎಂದು ಹೇಳಿದರು.

ಇದೀಗ ಗ್ರಾಮ ಸಭೆಯು ತಾ.25 ರಂದು ನಿಗದಿಯಾಗಿರುವದಾಗಿ ಗ್ರಾ.ಪಂ. ಮೂಲಗಳು ಸ್ಪಷ್ಟಪಡಿಸಿವೆ.