ಮಡಿಕೇರಿ, ಅ. 10: ಮೈಸೂರಿನಿಂದ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಚತುಷ್ಪಥ ರಸ್ತೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ಇಂದು ಜನಸಂಪರ್ಕ ಸಭೆ ಆಯೋಜಿಸುವ ಮುಖಾಂತರ ಅಭಿಪ್ರಾಯ ಪಡೆಯಲಾಯಿತು. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಉಪಸ್ಥಿತಿಯಲ್ಲಿ ಹೆದ್ದಾರಿ ಪ್ರಾಧಿಕಾರದ ವಿಶೇಷ ಯೋಜನಾ ಅಧಿಕಾರಿ ಬಿ.ಟಿ. ಶ್ರೀಧರ್ ಅಭಿಪ್ರಾಯ ಮಂಡಿಸುತ್ತಾ, ಜನತೆಯ ಸುರಕ್ಷತೆಗಾಗಿ ಮತ್ತು ಸಮಯ ಉಳಿತಾಯದೊಂದಿಗೆ ವಾಹನ ದಟ್ಟಣೆ ತಪ್ಪಿಸಲು ಹೆದ್ದಾರಿಯ ಚತುಷ್ಪಥ ವ್ಯವಸ್ಥೆ ಅನಿವಾರ್ಯವೆಂದು ನೆನಪಿಸಿದರು.ಈ ದಿಸೆಯಲ್ಲಿ ಕೇಂದ್ರ ಸರಕಾರದ ಆಶಯದಂತೆ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಪ್ರಮುಖ ಸಂಪರ್ಕ ರಸ್ತೆ ಚತುಷ್ಪಥದಿಂದ ಕೂಡಿರಬೇಕೆಂಬ ನಿಯಮಾನುಸಾರ ಯೋಜನೆ ರೂಪಿಸುವ ದಿಕ್ಕಿನಲ್ಲಿ ಜನಸಂಪರ್ಕ ಸಭೆ ಆಯೋಜಿಸ ಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಪ್ರಾಥಮಿಕ ಹಂತದ ನೀಲಿನಕಾಶೆ ತಯಾರಿಸಿದ್ದು, ಅದನ್ನು ಜನತೆಯ ಮುಂದಿಟ್ಟು ಬದಲಾವಣೆ ಗಳಿದ್ದರೆ ಮಾರ್ಪಾಡು ಗೊಳಿಸಲಾ ಗುವದು ಎಂಬ ಇಂಗಿತ ವ್ಯಕ್ತಪಡಿಸಿದರು.

ಮಾರ್ಗ ನೋಟ : ಮೈಸೂರು ಹೊರವಲಯದ ಇಲವಾಲ ಬಳಿ ಶ್ರೀರಂಗಪಟ್ಟಣ ರಸ್ತೆ ತಿರುವಿನಿಂದ ಸಂಪರ್ಕ ಸಾಧಿಸುವ ಮೈಸೂರು - ಮಡಿಕೇರಿ ಚತುಷ್ಪಥ ರಸ್ತೆಯು ಹುಣಸೂರು ಹಾಗೂ ಪಿರಿಯಾ ಪಟ್ಟಣದ ನಗರ ಪ್ರದೇಶಗಳಲ್ಲಿ ‘ಬೈಪಾಸ್’ ಮೂಲಕ ಸಾಗುತ್ತಾ, ದಕ್ಷಿಣ ಕೊಡಗಿನ ಆನೆಚೌಕೂರು ಮಾರ್ಗದತ್ತ ಸಾಗುವ ತಿರುವಿನಿಂದ ಮುಖ್ಯ

(ಮೊದಲ ಪುಟದಿಂದ) ಹೆದ್ದಾರಿಯಲ್ಲಿ ಮುಂದು ವರಿದು ಕಂಪಲಾಪುರ, ಚಿಲ್ಕುಂದ ವ್ಯಾಪ್ತಿಯಲ್ಲಿ ಮತ್ತೆ ಬೈಪಾಸ್‍ನಲ್ಲಿ ಸಾಗಲಿದೆ. ಅಲ್ಲಿಂದ ಮುಂದುವರಿದು, ಕೊಡಗಿನ ಗಡಿ ಕೊಪ್ಪ ವ್ಯಾಪ್ತಿಯ ಕಾವೇರಿ ಹೊಳೆ ಸೇತುವೆ ತನಕ ಸಾಗಲಿದೆ.

ಅಲ್ಲಿ ಮತ್ತೆ ಕುಶಾಲನಗರ ಪಟ್ಟಣದ ಹೊರವಲಯದೊಂದಿಗೆ ಗುಡ್ಡೆಹೊಸೂರು ತನಕ ಬೈಪಾಸ್‍ನಲ್ಲಿ ಈ ಚತುಷ್ಪಥ ಮಾರ್ಗ ಸಂಪರ್ಕ ಸಾಧಿಸಲಿದೆ. ಬಳಿಕ ಸುಂಟಿಕೊಪ್ಪ ಪಟ್ಟಣದ ಹೊರವಲಯದೆಡೆಗೆ ಮತ್ತೆ ಸಾಗಲಿರುವ ಚತುಷ್ಪಥ ಮಾರ್ಗ ಆನೆಕಾಡು ನಡುವಿನಲ್ಲಿ ಮೇಲ್ಸೇತುವೆ ಯೊಂದಿಗೆ ಮುಂದುವರಿಯಲಿದೆ. ಈ ಪ್ರದೇಶದಲ್ಲಿ ದೈನಂದಿನ ಚಲನವಲನದೊಂದಿಗೆ ಕಾಡಾನೆಗಳ ಸುರಕ್ಷತೆಯೊಂದಿಗೆ, ಅವುಗಳ ಓಡಾಟಕ್ಕೆ ತೊಂದರೆಯಾಗದಂತೆ ಮಾರ್ಗ ರೂಪುಗೊಳ್ಳಲಿದೆ.

ಹೀಗೆ ಸುಂಟಿಕೊಪ್ಪ ತನಕ ಚತುಷ್ಪಥ ಮಾರ್ಗ ಮುಂದುವರಿದು, ಪಟ್ಟಣ ಪ್ರವೇಶಿಸುವ ಮುನ್ನ ಎಡಕ್ಕೆ ಬೈಪಾಸ್ ಮುಖಾಂತರ ಗದ್ದೆಹಳ್ಳ ತಿರುವಿನ ಚೆಟ್ಟಳ್ಳಿ ಮಾರ್ಗದಲ್ಲಿ ಸಂಪರ್ಕ ಪಡೆದುಕೊಳ್ಳಲಿದೆ. ಅಲ್ಲಿಂದ ಮಡಿಕೇರಿ ನಗರದ ಶಾಂತಿಚರ್ಚ್ ಸರಹದ್ದು ತನಕ ನಾಲ್ಕು ಪಥ ಮುಂದುವರಿಯಲಿದೆ.

ಮತ್ತೆ ತಿರುವು: ಮಡಿಕೇರಿ ಪಟ್ಟಣದೊಳಗೆ ವಾಹನ ದಟ್ಟಣೆ ತಪ್ಪಿಸಲು ಜನರಲ್ ತಿಮ್ಮಯ್ಯ ಮುಖ್ಯ ರಸ್ತೆಯ ಶಾಂತಿ ಚರ್ಚ್ ಬಳಿಯಿಂದ ಮೂರ್ನಾಡು ರಸ್ತೆ ಮೂಲಕ ಮಂಗಳೂರು ರಸ್ತೆಗೆ ಸುರಕ್ಷಿತ ಕ್ರಮದಿಂದ ಚತುಷ್ಪಥ ಸಂಪರ್ಕ ಕಲ್ಪಿಸಲಾಗುವದು ಎಂದು ಮಾಹಿತಿ ನೀಡಲಾಯಿತು.

ಯಾರ ಮಾತಿಗೆ ಕಿವಿಗೊಡಬೇಡಿ: ಹೆದ್ದಾರಿ ಅಭಿವೃದ್ಧಿ ಕೈಗೊಳ್ಳುವಾಗ ರಾಷ್ಟ್ರೀಯ ಹೆದ್ದಾರಿ ಒಕ್ಕೂಟ ವ್ಯವಸ್ಥೆಯ ನಿಯಮಗಳ ಅನುಷ್ಠಾನದೊಂದಿಗೆ, ಚತುಷ್ಪಥ ಮಾರ್ಗ ಸಾಗುವ ಬೆಟ್ಟ ಶ್ರೇಣಿ ಹಾಗೂ ಗುಡ್ಡಗಳ ನಡುವೆ ಸಮರ್ಪಕ ತಡೆಗೋಡೆ, ಚರಂಡಿ ವ್ಯವಸ್ಥೆ ಕಲ್ಪಿಸುವ ಮುಖಾಂತರ ಅಭಿವೃದ್ಧಿಗೆ; ಕರ್ನಾಟಕ ಬೆಳೆಗಾರರ ಒಕ್ಕೂಟ ಬೆಂಬಲಿಸುವದಾಗಿ ಸಂಘಟನೆ ಪರವಾಗಿ ಸಂಚಾಲಕ ಕೆ.ಕೆ. ವಿಶ್ವನಾಥ್ ಘೋಷಿಸಿದರು. ಪ್ರತಿಯೊಬ್ಬರು ಕೊಡಗಿಗೆ ಪೂರಕ ಅಭಿವೃದ್ಧಿಯನ್ನು ಬೆಂಬಲಿಸುವ ಮೂಲಕ ಅಪಪ್ರಚಾರಕ್ಕೆ ಕಿವಿಗೊಡದಂತೆ ಸಲಹೆ ನೀಡಿದರು. ಯಾವತ್ತೂ ರೈತ, ಪ್ರಕೃತಿಗೆ ಹಾನಿ ಉಂಟುಮಾಡಿಲ್ಲ ಎಂದು ಇದೇ ವೇಳೆ ಅವರು ನೆನಪಿಸಿದರು.

ಸಂಘಟನೆಯ ಉಪಾಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಚತುಷ್ಪಥ ರಸ್ತೆ ಯೋಜನೆ ಅಗತ್ಯವೆಂದು ಪ್ರತಿಪಾದಿಸುತ್ತಾ, ಈಚಿನ ಪ್ರಾಕೃತಿಕ ವಿಕೋಪ ಸಂಬಂಧ ರಾಷ್ಟ್ರೀಯ ಭೂಗರ್ಭ ಇಲಾಖೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದು, ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ವಕೀಲ ನಾಗೇಂದ್ರ ಬಾಬು ಅವರುಗಳು ಕೊಡಗಿನ ಅಭಿವೃದ್ಧಿಗೆ ಅಪಸ್ವರವನ್ನು ಸಹಿಸಲಾಗದೆಂದು ಟೀಕಿಸುತ್ತಾ, ರಸ್ತೆ ಅಭಿವೃದ್ಧಿಯಿಂದ ಎಲ್ಲರಿಗೂ ಒಳಿತಾಗಲಿದೆ ಎಂದು ಸಮರ್ಥನೆ ನೀಡಿದರು.

ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಅಭಿವೃದ್ಧಿ ಕಾಮಗಾರಿಗೆ ವಿರೋಧ ವ್ಯಕ್ತಗೊಳಿಸುವ ಮನೋಭಾವನೆ ಜನತೆ ಕೈಬಿಡಬೇಕಿದೆ. ಈಗಾಗಲೆ ಪ್ರಸ್ತಾವಿತ ರೈಲ್ವೇ ಯೋಜನೆ ಕೂಡ ಇದರಿಂದ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿ ಹಲವು ವರ್ಗಗಳ ಜನತೆ ಬದುಕುತ್ತಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಎಲ್ಲಾ ಅನಾಹುತಗಳಿಗೆ ಪ್ರವಾಸೋದ್ಯಮ ವನ್ನು ಹೊಣೆ ಮಾಡುವದು ಸರಿಯಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚತುಷ್ಪಥ ರಸ್ತೆ ನಿರ್ಮಾಣ ಅಗತ್ಯವಾಗಿ ಬೇಕಿದೆ ಎಂದರು.

ವಿರೋಧ: ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ, ಜಿಲ್ಲೆಯ ಪರಿಸರಕ್ಕೆ ಮಾರಕವಾಗಿರುವ ಚತುಷ್ಪಥ ಯೋಜನೆಗೆ ವಿರೋಧವಿದೆ. ಅರಣ್ಯ ಸಂಪತ್ತು ನಾಶಗೊಳಿಸಿ ನಿರ್ಮಾಣವಾಗುವ ಹೆದ್ದಾರಿ ಕಾಮಗಾರಿ ಜಿಲ್ಲೆಗೆ ಅವಶ್ಯಕತೆಯಿಲ್ಲ. ಈಗಾಗಲೆ ಜಿಲ್ಲೆ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದು , ನೈಸರ್ಗಿಕ ಜಲಮೂಲಗಳಿಗೆ ಅಡಚಣೆ ಉಂಟಾಗಲಿದೆ. ಜಿಲ್ಲೆಯಲ್ಲಿ ಮಿತಿಮೀರಿದ ಪ್ರವಾಸೋದ್ಯಮ ಕೂಡ ಶಾಪವಾಗಿ ಪರಿಣಮಿಸಿದ್ದು ಈ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿದರು.

ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿ ಪ್ರಮುಖ ಜೆ.ಪಿ.ಅಯ್ಯಣ್ಣ ಮಾತನಾಡಿ, ಪರಿಸರಕ್ಕೆ ಧಕ್ಕೆಯುಂಟು ಮಾಡಿ ಕೈಗೊಳ್ಳುವ ಯಾವದೇ ಅಭಿವೃದ್ಧಿ ಕಾಮಗಾರಿ ಅಗತ್ಯವಿಲ್ಲ. ಪರಿಸರಕ್ಕೆ ಹಾನಿಯುಂಟಾಗದಂತೆ ಅಭಿವೃದ್ಧಿ ಯೋಜನೆ ರೂಪಿಸಿ ನಮ್ಮ ಅಭ್ಯಂತರವಿಲ್ಲ ಎಂದರು. ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್‍ರಾಜ್ ಮಾತನಾಡಿ, ಕುಶಾಲನಗರದವರೆಗೆ ಚತುಷ್ಪಥ ರಸ್ತೆ ನಿರ್ಮಾಣವನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಮರಗಳ ಹನನವಾಗದಂತೆ ವಿದೇಶ ತಂತ್ರಜ್ಞಾನಗಳನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಕೈಗೊಳ್ಳಲಿ. ಬೇರೆಡೆಗಳಿಗೆ ವ್ಯರ್ಥವಾಗಿ ವಿನಿಯೋಜಿಸುವ ಕೋಟ್ಯಾಂತರ ರೂಗಳನ್ನು ಈ ಕಾಮಗಾರಿಗೆ ಬಳಸಿಕೊಂಡು ಅತ್ಯಂತ ವ್ಯವಸ್ಥಿತ, ಸುಸಜ್ಜಿತ ಯೋಜನೆಗಳ ಮೂಲಕ ಚತುಷ್ಪತ ರಸ್ತೆ ನಿರ್ಮಿಸಲು ಸಲಹೆ ನೀಡಿದರು.

ಕಾವೇರಿ ಸೇನೆಯ ರವಿ ಚಂಗಪ್ಪ, ಯುಕೋ ಸಂಘಟನೆಯ ಮಂಜು ಚಿಣ್ಣಪ್ಪ, ವಿವಿಧ ಪ್ರಮುಖರಾದ ಪ್ರೊ. ಬೆಳ್ಯಪ್ಪ, ಮೋಹನ್‍ದಾಸ್, ದೇವರಾಜ್, ಮಾತನಾಡಿ, ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಲವೆಡೆಗಳಲ್ಲಿ ಹೆದ್ದಾರಿ ನಿರ್ಮಾಣಗೊಂಡ ಬಳಿಕ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ಭೂಸ್ವಾಧೀನ ಅಧಿಕಾರಿ ದೇವರಾಜು, ರಸ್ತೆ ನಿರ್ಮಾಣ ಸಂದರ್ಭ ಭೂಮಿ, ತೋಟ, ಮನೆ, ಆಸ್ತಿಗಳನ್ನು ಕಳೆದುಕೊಳ್ಳವವರು ಚಿಂತಿಸಬೇಕಿಲ್ಲ. ಅತ್ಯಂತ ನ್ಯಾಯೋಚಿತವಾದ ಪರಿಹಾರ ಪ್ರಾಧಿಕಾರದಿಂದ ಒದಗಿಸಲು ಕಾಯ್ದೆ ರೂಪಿಸಲಾಗಿದೆ ಎಂದರು.

ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಕುಮಾರ್ ಮಾತನಾಡಿ, ಜನರಿಂದ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ಹೆದ್ದಾರಿ ನಿರ್ಮಿಸುವ ಬಗ್ಗೆ ಈಗಾಗಲೆ ಪೂರ್ವ ಯೋಜನೆ ಮಾಡಲಾಗಿದ್ದು ರಸ್ತೆ ನಿರ್ಮಾಣಕ್ಕೆ 30 ಮೀಟರ್ ಅಗತ್ಯವಿದ್ದು ನಂತರದ ಚರಂಡಿ, ರಿಟೇನಿಂಗ್ ವಾಲ್ ನಿರ್ಮಾಣಕ್ಕೆ ಹೆಚ್ಚುವರಿ ಸ್ಥಳದ ಅಗತ್ಯವಿರುವ ಕಾರಣ 45 ಮೀಟರ್ ಸ್ಥಳ ಸ್ವಾಧೀನಕ್ಕೆ ಚಿಂತನೆ ಹರಿಸಲಾಗಿದೆ ಎಂದರು. ಸಭೆಯಲ್ಲಿ ಸಾರ್ವಜನಿಕರು ಮಂಡಿಸಿದ ವಿಷಯಗಳನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಆಲಿಸಿದರಲ್ಲದೆ, ಎಲ್ಲವನ್ನು ಕ್ರೋಢೀಕರಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಬೆಳೆಗಾರರು, ಸಾರ್ವಜನಿಕರು ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು. ಈ ವೇಳೆ ಅನೇಕ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಯಿತು. ಡಿವೈಎಸ್‍ಪಿ ಮುರುಳಿಧರ್ ಸೇರಿದಂತೆ ಇತರ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.