ಮಡಿಕೇರಿ, ಅ.10 : ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಿದ ಸ್ತಬ್ಧಚಿತ್ರವು ಮಂಗಳವಾರ ವೀರಾಜಪೇಟೆ ಮತ್ತು ಮಡಿಕೇರಿಗೆ ಆಗಮಿಸಿತು.
ಈ ಸಂದರ್ಭದಲ್ಲಿ ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಟಿ.ಪಿ.ರಮೇಶ್, ಸದಸ್ಯರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ನಗರದ ಗಾಂಧಿ ಮೈದಾನದಲ್ಲಿ ಪುಷ್ಪ ನಮನ ಸಲ್ಲಿಸಿ ಮಳೆ ನಡುವೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಸರ್ವೋದಯ ಸಮಿತಿ ಅಧ್ಯಕ್ಷರು ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚರಣೆ ಪ್ರಯುಕ್ತ ಗಾಂಧೀಜಿಯವರ ಜೀವನ ಸಂದೇಶಗಳನ್ನು ಎಲ್ಲೆಡೆ ಪ್ರಚುರ ಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಾಂಧೀಜಿ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತಾಗಬೇಕು ಎಂದರು.
ಗಾಂಧೀಜಿಯವರ ಅಹಿಂಸೆ, ಸತ್ಯಮಾರ್ಗವನ್ನು ಅಳವಡಿಸಿಕೊಳ್ಳಬೇಕು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಹಾಕಿದ್ದಾರೆ. ಅಹಿಂಸೆ ಮತ್ತು ಸತ್ಯಾಗ್ರಹ ಮೂಲಕ ಹೋರಾಟ ನಡೆಸಿರುವ ಮಹಾತ್ಮ ಗಾಂಧೀಜಿಯವರ ತತ್ವ ಹಾಗೂ ಆದರ್ಶ ಹಾಗೂ ಶಾಂತಿ ಮಾರ್ಗವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಅವರು ಕರೆ ನೀಡಿದರು.
ಸರ್ವೋದಯ ಸಮಿತಿ ಸದಸ್ಯರಾದ ಅಂಬೆಕಲ್ ಕುಶಾಲಪ್ಪ, ಅಂಬೆಕಲ್ ನವೀನ್, ಕೋಡಿ ಚಂದ್ರಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಶಿನಾಥ್, ಸಂತ ಮೈಕಲರ ಶಾಲೆಯ ಮುಖ್ಯೋಪಾಧ್ಯಾಯರಾದ ವಿನ್ಸೆಂಟ್, ಶಾಲಾ ವಿದ್ಯಾರ್ಥಿಗಳು, ಇತರರು ಇದ್ದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು.