ಸೋಮವಾರಪೇಟೆ, ಅ. 10: ಮಲ್ಲಳ್ಳಿ ಜಲಪಾತದಲ್ಲಿ ಮಂಗಳವಾರ ಸಂಜೆ ನೀರಿನಲ್ಲಿ ಕೊಚ್ಚಿಹೋಗಿದ್ದ ಪ್ರವಾಸಿ ಯುವಕನ ಶವ ಸಂಜೆ ಪತ್ತೆಯಾಗಿದೆ.
ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಅರೆಹಳ್ಳಿ ಗ್ರಾಮದ ಕೃಷಿಕ ಅಬ್ದುಲ್ ಜಲೀಲ್ ಎಂಬವರ ಪುತ್ರ ಜಾವೀದ್ (27) ಎಂಬಾತನೆ ಸಾವಿಗೀಡಾದ ದುರ್ದೈವಿ.
ಅರೆಹಳ್ಳಿ ಗ್ರಾಮದ ಐವರು ಯುವಕರು ಮಂಗಳವಾರ ತಮ್ಮ ಕಾರಿನಲ್ಲಿ ಜಲಪಾತದ ವೀಕ್ಷಣೆಗೆ ಬಂದಿದ್ದು, ನಂತರ ಈರ್ವರು ಎಚ್ಚರಿಕೆ ಫಲಕವನ್ನು ಗಮನಿಸದೆ ಜಲಪಾತದ ಸುತ್ತಲೂ ಅಳವಡಿಸಿರುವ ಮೆಶ್‍ನ್ನು ಹತ್ತಿ ಇಳಿದು ಸಮೀಪದ ಬಂಡೆಕಲ್ಲಿನಲ್ಲಿ ನಿಂತಿದ್ದು, ಜಲಪಾತದ ಅನತಿ ದೂರದಲ್ಲಿರುವ ಮಿನಿ ಜಲವಿದ್ಯುತ್ ಘಟಕದಿಂದ ನೀರು ಬಿಟ್ಟ ಸಂದರ್ಭ ಜಲಪಾತದ ನೀರಿನ ಹರಿವು ಜಾಸ್ತಿಯಾಗಿ ಜಾವೀದ್ ನೀರಿನಲ್ಲಿ ಕೊಚ್ಚಿಹೋಗಿದ್ದ, ಸಮೀಪದ ಇನ್ನೊಂದು ಬಂಡೆಕಲ್ಲಿನಲ್ಲಿ ಆಶ್ರಯ ಪಡೆದಿದ್ದ ಯುವಕ ಫಾಜೀಲ್‍ನನ್ನು ಗ್ರಾಮಸ್ಥರು ರಕ್ಷಿಸಿದ್ದರು.
ಇಂದು ಬೆಳಿಗ್ಗೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಪುಟ್ಟಪ್ಪ, ಸಿಬ್ಬಂದಿಗಳಾದ ಶಶಿಧರ್, ಜಗದೀಶ್, ನೇತೃತ್ವದಲ್ಲಿ ಗರಗಂದೂರಿನ ಲತೀಫ್, ಪಸನ್ನ, ಪ್ರಕಾಶ್, ಗ್ರಾಮಸ್ಥರಾದ ಚಿಣ್ಣಪ್ಪ, ಅಶೋಕ, ದೇಶ್, ಗಣೇಶ್ ಮತ್ತಿತರರು ಹುಡುಕಾಟ ನಡೆಸಿ, ಶವವನ್ನು ಪತ್ತೆಹಚ್ಚಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೆ ಶವಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ನೀರು ಬಿಡುತ್ತಿರುವದಕ್ಕೆ ಆಕ್ರೋಶ: ಜಲಪಾತದ ಅನತಿ ದೂರದಲ್ಲಿರುವ ಮಿನಿ ವಿದ್ಯುತ್ ಘಟಕದಲ್ಲಿ ಸಂಗ್ರಹ ಮಾಡಿದ ನೀರನ್ನು ಹಗಲಿನ ವೇಳೆ ಕುಮಾರಧಾರ ನದಿಗೆ ಬಿಡಬಾರದೆಂದು ಇಂದು ನಡೆದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಲ್ಲಳ್ಳಿ ಜಲಪಾತ ಪ್ರವಾಸೋದÀ್ಯಮ ಇಲಾಖೆಗೆ ಒಳಪಟ್ಟಿದ್ದು, ದಿನಂಪ್ರತಿ ಪ್ರವಾಸಿಗರು ಬರುತ್ತಾರೆ. ಕುಮಾರಧಾರ ನದಿಯ ನೀರನ್ನು ತಡೆಹಿಡಿಯಲು ಅವಕಾಶ ಮಾಡಿಕೊಡಬಾರದು ಎಂದು ಪ್ರಮುಖರಾದ ಕೆ.ಎಂ. ಲೋಕೇಶ್, ಕೆ.ಕೆ. ಗೋಪಾಲ್, ಲೋಕೇಶ್ವರಿ ಗೋಪಾಲ್, ಕುಂದಳ್ಳಿ ದಿನೇಶ್ ಮತ್ತಿತರರು ಆಗ್ರಹಿಸಿದರು.
ಹಗಲಿನ ವೇಳೆ ವಿದ್ಯುತ್ ಘಟಕದಿಂದ ನೀರು ಬಿಡುತ್ತಿದ್ದು, ಇದರಿಂದ ಸಾವು, ನೋವುಗಳು ಸಂಭವಿಸುತ್ತಿವೆ. ಮಂಗಳವಾರ ಸಂಜೆ 5.30ಕ್ಕೆ ನೀರುಬಿಟ್ಟ ಪರಿಣಾಮ ಅರೆಹಳ್ಳಿ ಯುವಕ ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾರೆ. ಸಾವಿಗೆ ಕಾರಣವಾದ ಜಲವಿದ್ಯುತ್ ಘಟಕದ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.