ಕೂಡಿಗೆ, ಅ. 9: ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಎನ್‍ಎಸ್‍ಎಸ್ ಶಿಬಿರ ನಡೆಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಯುವ ಜನತೆಯನ್ನು ಸಾಮಾಜಿಕ ಸೇವೆಯತ್ತ ಸೆಳೆಯುವ, ಯುವಶಕ್ತಿಯನ್ನು ಸಮಾಜಕ್ಕೆ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶಕ್ಕಾಗಿಯೇ ಪ್ರಾರಂಭವಾಗಿದೆ ಎಂದರು.
ಕೂಡಿಗೆ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ಭಾರತವು ಬಹುತೇಕ ಹಳ್ಳಿಗಳಿಂದ ಕೂಡಿದ್ದು, ಸಮಾಜದ ಸ್ವಾಸ್ಥ್ಯ ಸುಧಾರಣೆಯಲ್ಲಿ ಹಳ್ಳಿಗಳ ಪಾತ್ರ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪನ್ಯಾಸಕ ಸತ್ಯನಾರಾಯಣ ಮಾತನಾಡಿ, ಕಾಲೇಜಿನ ಎನ್‍ಎಸ್‍ಎಸ್ ಘಟಕವು ಹೊಸ ಹೊಸ ಚಿಂತನೆಯಲ್ಲಿ ತೊಡಗಿದ್ದು, ಹೆಚ್ಚು ಹೆಚ್ಚು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಪ್ರಸಾದ್ ಸಾಲಿಯಾನ್, ಶ್ರೀಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು ಇದ್ದರು. ನಂತರ ವೃದ್ಧರಿಗೆ ಮನರಂಜನೆ ಕಾರ್ಯಕ್ರಮ ಗಳನ್ನು ವಿದ್ಯಾರ್ಥಿಗಳು ನಡೆಸಿದರು.
ಕಾರ್ಯಕ್ರಮವನ್ನು ಎನ್‍ಎಸ್‍ಎಸ್ ವಿದ್ಯಾರ್ಥಿಗಳಾದ ಪಲ್ಲವಿ, ರಕ್ಷಿತ ನಿರ್ವಹಿಸಿದರು.