ಮಡಿಕೇರಿ, ಅ. 9: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರಕ್ಕೆ ಪ್ರಸಕ್ತ ವರ್ಷ ಸುರಿದಿರುವ ಮಳೆ ಕಳೆದ ಇಡೀ ವರ್ಷದಲ್ಲಿ ಸುರಿದ ಮಳೆಯ ಪ್ರಮಾಣಕ್ಕಿಂತ ಬರೋಬ್ಬರಿ 100.72 ಇಂಚಿನಷ್ಟು ದಾಖಲಾಗಿದೆ. ಕೃಷಿ ಸಂಶೋಧನಾ ಕೇಂದ್ರದಲ್ಲಿನ ಮಳೆ ಮಾಪನಾ ಕೇಂದ್ರದ ಮಾಹಿತಿಯಂತೆ ಈ ವರ್ಷ ಅಕ್ಟೋಬರ್ 9ರ ದಿನಾಂಕಕ್ಕೆ ಮಳೆ ಹೆಚ್ಚುವರಿಯಾಗಿ ಶತಕ ದಾಟಿದೆ. 2017ರಲ್ಲಿ ಜನವರಿ ಆರಂಭದಿಂದ ಡಿಸೆಂಬರ್ ಅಂತ್ಯದ ತನಕ ಸುರಿದಿರುವ ಮಳೆ 113.64 ಇಂಚಿನಷ್ಟಾಗಿತ್ತು. ಆದರೆ 2018ರ ಚಿತ್ರಣವೇ ಬೇರೆಯಾಗಿದೆ. ಈ ಸಾಲಿನಲ್ಲಿ ಅಕ್ಟೋಬರ್ 9ರ ವೇಳೆಗೆ ಮಡಿಕೇರಿ ನಗರಕ್ಕೆ ಬಿದ್ದಿರುವದು 228 ಇಂಚು ಮಳೆಯಾಗಿದೆ. ಕಳೆದ ಇಡೀ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ವರ್ಷ ಪೂರ್ಣಗೊಳ್ಳಲು ಇನ್ನೂ 80 ದಿನಗಳಷ್ಟು ಸಮಯ ಬಾಕಿ ಇರುವಾಗಲೇ ಈ ಪ್ರಮಾಣ 114.36 ಇಂಚಿನಷ್ಟು ಅಧಿಕವಾಗಿದೆ.