ನಾಪೆÇೀಕ್ಲು, ಅ. 9: ಗ್ರಾಮೀಣ ಪ್ರದೇಶದಲ್ಲಿ ಎಟಿಎಂ ಘಟಕಗಳಿಂದ ಸುಲಭವಾಗಿ ಖಾತೆಗಳಿಂದ ಹಣ ಪಡೆಯುತ್ತಿದ್ದ ಗ್ರಾಮೀಣ ಗ್ರಾಹಕರು ಇನ್ನು ಮುಂದೆ ಪಟ್ಟಣಗಳಿಗೆ ತೆರಳುವ ಪರಿಸ್ಥಿತಿ ಬಂದೊದಗಿದೆ. ಎಟಿಎಂಗಳ ನಿರ್ವಹಣೆಗೆ ಪರದಾಡುತ್ತಿರುವ ಬ್ಯಾಂಕುಗಳು ಕೆಲವೊಂದು ಘಟಕಗಳನ್ನು ಮುಚ್ಚಲು ಸಿದ್ಧತೆ ನಡೆಸಿವೆ.

ಕೆನರಾ ಬ್ಯಾಂಕಿನ ನಾಲ್ಕು ಎಟಿಎಂ ಘಟಕಗಳನ್ನು ಮುಚ್ಚಲು ಗ್ರಾಮೀಣ ಪ್ರದೇಶದ ಬ್ಯಾಂಕುಗಳಿಗೆ ಆದೇಶ ಬಂದಿದ್ದು, ಶನಿವಾರದಿಂದ ವ್ಯವಹಾರ ಸ್ಥಗಿತಗೊಂಡಿದೆ. ಜಿಲ್ಲೆಯ ಕೆನರಾ ಬ್ಯಾಂಕಿನ ನಾಲ್ಕು ಗ್ರಾಮೀಣ ಶಾಖೆಗಳಲ್ಲಿ ಈ ಹಿಂದೆ ತೆರೆಯಲಾಗಿದ್ದ ಎಟಿಎಂ ಘಟಕಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ.

ಜಿಲ್ಲೆಯ ಮಕ್ಕಂದೂರು, ಮಾಯಮುಡಿ, ಬಿರುನಾಣಿ ಹಾಗೂ ಬಲ್ಲಮಾವಟಿ ಗ್ರಾಮಗಳಲ್ಲಿ ಕೆನರಾ ಬ್ಯಾಂಕಿನ ಎಟಿಎಂ ಘಟಕಗಳಿದ್ದು, ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಲಾಗಿದೆ. ಬಲ್ಲಮಾವಟಿ ಗ್ರಾಮದಲ್ಲಿ 2013ರಲ್ಲಿ ಎಟಿಎಂ ಘಟಕವನ್ನು ತೆರೆಯಲಾಗಿತ್ತು. ಈ ಶಾಖೆಯಿಂದ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನಕಾರಿಯಾಗಿತ್ತು. ನಾಪೆÇೀಕ್ಲುವಿನಲ್ಲಿರುವ ಎಟಿಎಂ ಘಟಕ ಪದೇ ಪದೇ ಕೈಕೊಡುತ್ತಿದ್ದುದರಿಂದ ಗ್ರಾಹಕರು ಹೋಬಳಿಯ ಸುತ್ತಮುತ್ತಲ ಪ್ರದೇಶದಿಂದ ಬಲ್ಲಮಾವಟಿ ಗ್ರಾಮಕ್ಕೆ ಬಂದು ಎಟಿಎಂ ಘಟಕದಿಂದ ಹಣ ಪಡೆಯುತ್ತಿದ್ದರು. ಭಾಗಮಂಡಲ ಮೂಲಕ ಕೇರಳಕ್ಕೆ ತೆರಳುವ ಮಂದಿಗೂ ಈ ಎಟಿಎಂ ಘಟಕದಿಂದ ಪ್ರಯೋಜನವಾಗಿತ್ತು. ಕೆಲವೊಂದು ಬಾರಿ ಸರ್ವರ್ ಸಮಸ್ಯೆ ಹೊರತು ಪಡಿಸಿದರೆ ಹೆಚ್ಚಿನ ಸಮಸ್ಯೆ ಎಟಿಎಂ ಘಟಕಕ್ಕೆ ಇರಲಿಲ್ಲ. ಕೆಲವೊಮ್ಮೆ ದುರಸ್ತಿಗೆ ಬೆಂಗಳೂರಿನಿಂದ ತಂತ್ರಜ್ಞರನ್ನು ಕರೆಸುವ ಸಂದರ್ಭ ಬಿಟ್ಟರೆ ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಮೀಣ ಜನರು ಪ್ರಯೋಜನ ಹೊಂದಿದ್ದು ಹೆಚ್ಚು. ಇದೀಗ ಎಟಿಎಂ ಘಟಕದ ಸ್ಥಗಿತಗೊಳಿಸುವಿಕೆಯಿಂದ ಗ್ರಾಮೀಣ ಜನರು ಹಣಕಾಸಿನ ವ್ಯವಸ್ಥೆಗೆ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.