ಮಡಿಕೇರಿ, ಅ: 9: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು ನಾನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅವರಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ, ಕೊಡಗು ಜಿಲ್ಲಾ ಉಸ್ತುವಾರಿ ಎಸ್.ಎ. ಹುಸೇನ್ ತಿಳಿಸಿದ್ದಾರೆ.

ಪಕ್ಷದ ಬ್ಲಾಕ್ ಮಟ್ಟದ ಅಧ್ಯಕ್ಷರುಗಳಲ್ಲಿ ಹೊಸ ವ್ಯವಸ್ಥೆ ತರಲು ಕೆಲವೆಡೆ ನಿರಾಸಕ್ತರಾದ ಅಧ್ಯಕ್ಷರನ್ನು ಬದಲಾಯಿಸಲು ಮತ್ತು 2 ಅವಧಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದವರನ್ನು ಬದಲಾಯಿಸುವ ಕುರಿತು ಜಿಲ್ಲಾ ಮಟ್ಟದ ಹಿರಿಯ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ತನಗೆ ವರದಿ ಸಲ್ಲಿಸಬೇಕಾಗಿದ್ದು, ಅದನ್ನು ಪರಿಶೀಲಿಸಿ ಕೆಪಿಸಿಸಿಗೆ ಕಳುಹಿಸಬೇಕಾಗಿ ಮತ್ತು ಈ ರೀತಿ ಬದಲಾವಣೆಯಾಗುವ ಬ್ಲಾಕ್ ಅಧ್ಯಕ್ಷರುಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಸೂಕ್ತ ಸ್ಥಾನಮಾನವನ್ನು ಕಲ್ಪಿಸಬೇಕಾಗಿದೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇತ್ತೀಚೆಗೆ ನೀಡಿದ ಹೇಳಿಕೆಯಿಂದ ಸ್ವಲ್ಪಮಟ್ಟಿಗೆ ಪಕ್ಷದ ನಾಯಕರಲ್ಲಿ ಗೊಂದಲ ಉಂಟಾಗಿತ್ತು.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನಲ್ಲಿ ಜಿಲ್ಲೆಯ ಕೆಪಿಸಿಸಿ ಪದಾಧಿಕಾರಿ, ಸದಸ್ಯರು, ವಿಧಾನಪರಿಷತ್ ಸದಸ್ಯರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಯಿಸಿ ಕೆಪಿಸಿಸಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಯಥಾವತ್ತಾಗಿ ಮುಂದುವರೆಯಲಿದೆ. ಮತ್ತು ಅದರ ಎಲ್ಲಾ ಘಟಕಗಳು ಮುಂದುವರಿಯಲಿವೆ. ಸದ್ಯದಲ್ಲೇ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಇಂದು ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಪಕ್ಷ ಸಂಘಟನೆಗಾಗಿ ಕೆಪಿಸಿಸಿ ನೀಡಿರುವ ಕಾರ್ಯಕ್ರಮಗಳನ್ನು ಆರಂಭಿಸಲಾ ಗುವದು. ಪಕ್ಷದ ನಾಯಕರು, ಕಾರ್ಯಕರ್ತರು ಪರ ಮತ್ತು ವಿರೋಧ ಹೇಳಿಕೆಗಳನ್ನು ಪತ್ರಿಕೆಗಳಿಗೆ ನೀಡಬಾರದೆಂದೂ ತಿಳಿಸಲಾಗಿದೆ. ಈ ರೀತಿ ವರ್ತಿಸುವವರ ಮೇಲೆ ಮುಂದಕ್ಕೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆಯೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.