ಮಡಿಕೇರಿ, ಅ. 9: ಪ್ರಾಕೃತಿಕ ವಿಕೋಪದಿಂದ ಕೊಡಗಿನಲ್ಲಿ ಉಂಟಾಗಿರುವ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ಕನಿಷ್ಟ 10 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜನ್ನು ನೀಡಬೇಕು ಎಂದು ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಗ್ರಹಿಸಿದರು.
ಇಂದು ಜಿಲ್ಲೆಗೆ ಆಗಮಿಸಿ ಮಾದಾಪುರ, ಹಟ್ಟಿಹೊಳೆ, ಮಕ್ಕಂದೂರು, ತಂತಿಪಾಲ ಸೇರಿದಂತೆ ಪ್ರಾಕೃತಿಕ ವಿಕೋಪಕ್ಕೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸುದರ್ಶನ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪ್ರಾಕೃತಿಕ ವಿಕೋಪದಿಂದ ಕೊಡಗಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾನಿಯಾಗಿ ಸುಮಾರು 500 ಕೋಟಿ ನಷ್ಟವಾಗಿದೆ. 605ಕೋಟಿಯಷ್ಟು ಲೋಕೋಪ ಯೋಗಿ ಇಲಾಖಾ ರಸ್ತೆಗಳು ನಾಶವಾಗಿದೆ. ಜಿಲ್ಲಾ ಪಂಚಾಯತ್, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಹಾನಿಯಿಂದ 364 ಕೋಟಿ ನಷ್ಟ ಉಂಟಾಗಿದೆ. ಕುಡಿಯುವ ನೀರು ಸರಬರಾಜು ಸಂಬಂಧ 3 ಕೋಟಿ, ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ 22 ಕೋಟಿ ನಷ್ಟವಾಗಿದೆ. 7804 ಹೆಕ್ಟೇರ್ ಬೆಳೆ ನಾಶ, 11,838 ಹೆಕ್ಟೇರ್ ತೋಟ ಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.
ಈ ಎಲ್ಲಾ ಹಾನಿಗಳ ನಷ್ಟವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಾಧ್ಯವಾಗುವದಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅನುದಾನವೂ ಸಾಕಾಗುವದಿಲ್ಲ. ಈ ಹಿನ್ನೆಲೆ ಕೊಡಗಿನಲ್ಲಿ ಸಂಭವಿಸಿರುವ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ನೀಡಬೇಕು ಎಂದು ವೀರಪ್ಪ ಮೊಯ್ಲಿ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದರು. ಪ್ರಾಕೃತಿಕ ವಿಕೋಪದ ಸಂದರ್ಭ ಕೊಡಗು ಜಿಲ್ಲಾಡಳಿತ
(ಮೊದಲ ಪುಟದಿಂದ) ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಳೆ ಹಾನಿಯಿಂದ ಕೊಡಗಿನಲ್ಲಿ 743 ಕುಟುಂಬಗಳು ಮನೆ ಕಳೆದುಕೊಂಡಿದ್ದು, ಅವರುಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ನವೆಂಬರ್ 2ನೇ ವಾರದಲ್ಲಿ ದೆಹಲಿಯಲ್ಲಿ ಕೊಡಗಿನ ಅಧಿಕಾರಿಗಳು, ರಾಜ್ಯದ ಅಧಿಕಾರಿ ಹಾಗೂ ಪ್ರಮುಖರನ್ನೊಳಗೊಂಡು ಸಭೆ ನಡೆಸಲಾಗುವದು. ಕೊಡಗಿನ ಸಮಸ್ಯೆ ಬಗ್ಗೆ ಚರ್ಚಿಸಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವದು. ನಿರಾಶ್ರಿತರ ಸಾಲ ಪಾವತಿ ಸಂಬಂಧ ಬ್ಯಾಂಕ್ ವಿಭಾಗದ ಉನ್ನತಾಧಿಕಾರಿಗಳೊಂದಿಗೂ ಮಾತುಕತೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವದು. ಈ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಡಿಸೆಂಬರ್‍ನ ಪಾರ್ಲಿಮೆಂಟ್ ಅಧಿವೇಶನದಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಾಗುವದೆಂದು ವೀರಪ್ಪಮೊಯ್ಲಿ ವಿವರಿಸಿದರು. ಎಂಎಲ್‍ಸಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಪ್ರಮುಖರಾದ ಮಿಟ್ಟು ಚಂಗಪ್ಪ ಮತ್ತಿತರರು ಇದ್ದರು.