ಕೂಡಿಗೆ, ಅ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಸಮೀಪ ಹರಿಯುತ್ತಿರುವ ಹಾರಂಗಿ ಮುಖ್ಯ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ದುರಸ್ತಿಗೊಂಡಿದ್ದು, ಬೀಳುವ ಹಂತದಲ್ಲಿದೆ. ಅನೇಕ ಭಾರಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳನ್ನು ನಡೆಸಲಾಗಿದೆ. ಈ ಸೇತುವೆ ಸಂಪರ್ಕವು ಕೂಡಿಗೆಯಿಂದ ಸೋಮವಾರಪೇಟೆಗೆ ಹೋಗುವ ದಾರಿಯಾಗಿದೆ. ಅಲ್ಲದೆ, 10 ಗ್ರಾಮಗಳ ಸಂಪರ್ಕ ಸೇತುವೆ ಕೂಡ ಆಗಿದೆ. ಆದ್ದರಿಂದ ಹೊಸ ಸೇತುವೆಯನ್ನು ನಿರ್ಮಿಸಲು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರನ್ವಯ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಸೇತುವೆಯು ದುರಸ್ತ್ಥಿಯಾಗಿರುವದನ್ನು ವೀಕ್ಷಿಸಿ, ಸೇತುವೆ ಮತ್ತು ಸಂಪರ್ಕಕ್ಕೆ ಕಾಂಕ್ರೀಟ್ ರಸ್ತೆಗೆ ರೂ. 5 ಕೋಟಿ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.