ಕೂಡಿಗೆ, ಅ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ನವಗ್ರಾಮ ಬಡಾವಣೆಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ, ಅಲ್ಲಿನ ನಿವಾಸಿಗಳು ನವಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೆ ನಂಬರ್ 59/1 ಜಾಗದಲ್ಲಿ ಸರ್ಕಾರವು ನಿರ್ಮಿಸಿರುವ ಬಡಾವಣೆಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಿದೆ. ಮುಖ್ಯ ರಸ್ತೆಯಿಂದ ನವಗ್ರಾಮಕ್ಕೆ ತೆರಳಲು ಒಂದು ಕಿ.ಮೀ. ಬಳಸಿ ಬರಬೇಕು. ವಿದ್ಯಾರ್ಥಿಗಳು, ಮಹಿಳೆಯರು, ಕೂಲಿಕಾರ್ಮಿಕರು ಮತ್ತು ಮಕ್ಕಳು ಹೆಚ್ಚು ದೂರ ಕ್ರಮಿಸಿ ನವಗ್ರಾಮದ ಬಡಾವಣೆಗೆ ತೆರಳಲು ಕಷ್ಟವಾಗುವ ಕಾರಣ ಹತ್ತಿರದ ಬಡಾವಣೆಯಿಂದ ಸಂಪರ್ಕ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಆಡಳಿತವನ್ನು ಒತ್ತಾಯಿಸಿದರು.

ಗ್ರಾಮಕ್ಕೆ ಹೊಂದಿಕೊಂಡಂತೆ ಸರ್ವೇ ನಂಬರ್ 59/1 ರ ಪೈಸಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದು ಕೂಡಲೇ ಆ ಜಾಗವನ್ನು ತೆರವುಗೊಳಿಸಿ, ಸಂಪರ್ಕ ರಸ್ತೆಯನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದರು.