ಕುಶಾಲನಗರ, ಅ. 8: ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಜಿಲ್ಲಾಡಳಿತ ಜಾಗ ನಿಗದಿ ಮಾಡಿರುವ ಬಗ್ಗೆ ಕುಶಾಲನಗರ ಎಲ್ಲಾ ದೇವಾಲಯಗಳ ಸಮಿತಿ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಪ್ರಮುಖರು ಸಭೆ ನಡೆಸಿದರು.
ಸರ್ವೆ ನಂ 17 ರಲ್ಲಿ 1 ಎಕರೆ ಜಾಗದಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ಯೋಜನೆ ಯನ್ನು ಜಿಲ್ಲಾಧಿಕಾರಿಗಳು ನಿರ್ಣಯ ಕೈಗೊಂಡಿದ್ದು ಈ ವ್ಯಾಪ್ತಿಯಲ್ಲಿ ಕುಶಾಲನಗರ ಪಟ್ಟಣದ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲು ಸ್ಥಳದ ಅವಶ್ಯಕತೆ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸಕ್ತ ಸ್ಥಳದಲ್ಲಿ ಯಾವದೇ ವಸತಿ ಯೋಜನೆ ಕೈಗೊಳ್ಳದಂತೆ ಸಭೆಯಲ್ಲಿ ಸಂಘ ಸಂಸ್ಥೆಗಳ ಪ್ರಮುಖರು ಒತ್ತಾಯಿಸಿದರು.
ಕುಶಾಲನಗರ ಸುತ್ತಮುತ್ತ ಗಡಿ ಭಾಗದಲ್ಲಿರುವ ಸರಕಾರಿ ಜಾಗವನ್ನು ಪರಿಶೀಲಿಸಿ ಇಂತಹ ಯೋಜನೆಗಳಿಗೆ ಬಳಸುವಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳ ಬೇಕೆಂದು ಸಭೆಯಲ್ಲಿ ಆಗ್ರಹ ಕೇಳಿಬಂತು.
ಸಭೆಯಲ್ಲಿ ದೇವಾಲಯಗಳ ಒಕ್ಕೂಟ ಅಧ್ಯಕ್ಷರಾದ ಎಂ.ಕೆ. ದಿನೇಶ್, ವಿ.ಎನ್. ವಸಂತಕುಮಾರ್, ವಿ.ಡಿ. ಪುಂಡರೀಕಾಕ್ಷ, ಬಿ.ಆರ್. ನಾಗೇಂದ್ರಪ್ರಸಾದ್, ವಿ.ಪಿ. ಶಶಿಧರ್, ಜಿ.ಎಲ್. ನಾಗರಾಜ್, ವಿ.ಪಿ. ನಾಗೇಶ್, ಶ್ರೀನಿವಾಸರಾವ್ ಮತ್ತಿತರರು ಇದ್ದರು.