ವೀರಾಜಪೇಟೆ, ಅ. 9: ಹಣಕಾಸಿನ ವಿಷಯದಲ್ಲಿ ಸಂಗಡಿಗರಿಬ್ಬರ ನಡುವೆ ಉಂಟಾದ ಘರ್ಷಣೆಯಲ್ಲಿ ಇಲ್ಲಿಗೆ ಸಮೀಪದ ಕಂಡಿಮಕ್ಕಿಯ ಶೇಖರ್ ಎಂಬಾತನ ಹೊಟ್ಟೆಯ ಬದಿಗೆ ಚೂರಿಯಿಂದ ತಿವಿದು ಕೊಲೆಗೆ ಯತ್ನಿಸಿದ ಆರೋಪದ ಮೇರೆ ಇಲ್ಲಿನ ನಗರ ಪೊಲೀಸರು ಎನ್. ಸುಬ್ರಮಣಿ ಎಂಬಾತನನ್ನು ಬಂಧಿಸಿದ್ದಾರೆ.
ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಶೇಖರ್ ಮನೆಗೆ ಸುಬ್ರಮಣಿ ತೆರಳಿದಾಗ ಹಣದ ವ್ಯವಹಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿದಾಗ ಸುಬ್ರಮಣಿ ತನ್ನ ಬಳಿಯಿದ್ದ ಚೂರಿಯಿಂದ ಶೇಖರ್ನ ಹೊಟ್ಟೆ ಭಾಗಕ್ಕೆ ತಿವಿದಿದ್ದಾನೆ. ಅದೇ ಸಮಯದಲ್ಲಿ ನಡೆದ ಘರ್ಷಣೆಯಲ್ಲಿ ಶೇಖರ್ನ ಬಳಿ ಇದ್ದ ಜೋಡಿ ನಳಿಗೆಯ ಕೋವಿಯಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಗುಂಡು ಯಾರಿಗೂ ತಗಲದೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರ ಪೊಲೀಸರು ಶೇಖರ್ ನೀಡಿದ ಕೊಲೆ ಯತ್ನದ ದೂರಿನ ಮೇರೆ ಸುಬ್ರಮಣಿ ವಿರುದ್ಧ ಐ.ಪಿ.ಸಿ 307 ರ ಪ್ರಕಾರ ಪ್ರಕರಣ ದಾಖಲಿಸಿದ್ದರೆ ಸುಬ್ರಮಣಿ ನೀಡಿದ ದೂರಿನ ಮೇರೆ ಶೇಖರ್ ವಿರುದ್ಧ ಐ.ಪಿ.ಸಿ 323, 506 ಹಾಗೂ ಶಸ್ತಾಸ್ತ್ರ ಕಾಯಿದೆ ಪ್ರಕಾರ ಮೊಕದ್ದಮೆ ಹೂಡಿದ್ದಾರೆ.
ನಗರ ಪೊಲೀಸರು ಇಬ್ಬರ ವಿರುದ್ಧ ಪರಸ್ಪರ ಪ್ರಕರಣ ದಾಖಲಿಸಿ ಶೇಖರ್ನ ಬಳಿ ಇದ್ದ ಜೋಡಿ ನಳಿಗೆಯ ಕೋವಿಯನ್ನು ವಶ ಪಡಿಸಿಕೊಂಡಿದ್ದಾರೆ.
ಚೂರಿ ತಿವಿತದಿಂದ ಗಾಯಗೊಂಡ ಶೇಖರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.