ಕೂಡಿಗೆ, ಅ. 9 : ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಬಸವನತ್ತೂರಿನಲ್ಲಿ ತಾಲ್ಲೂಕು ಪಂಚಾಯ್ತಿ ಕುಡಿಯುವ ನೀರಿನ ಯೋಜನೆಯ ವತಿಯಿಂದ ಕೊರೆಸಿದ್ದ ಕೊಳವೆ ಬಾವಿಗೆ ಕಿಡಿಗೇಡಿಗಳು ಕಲ್ಲುಗಳನ್ನು ತುಂಬಿ ಮೋಟಾರ್ ಅಳವಡಿಸದಂತೆ ಮಾಡಿರುವ ಘಟನೆ ಬೆಳಿಕಿಗೆ ಬಂದಿದೆ.
ಮಾರ್ಚ್ ತಿಂಗಳಲ್ಲಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಹಂಚಿಕೆಗೆ ಸಾಕಾಗದೆ ಇರುವದರಿಂದ ಈ ಕೊಳವೆ ಬಾವಿಯ ಹತ್ತು ಮೀಟರ್ ದೂರದಲ್ಲಿ ಕಳೆದ ತಿಂಗಳಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ರಾತ್ರಿ ಸಮಯವಾದ್ದರಿಂದ ಅಂದು ಕೆಲಸ ಸ್ಥಗಿತಗೊಳಿಸಿ ಮರುದಿನ ಬೆಳಿಗ್ಗೆ ಪೈಪ್ ಇಳಿಸಿ ಮೋಟಾರ್ ಅಳವಡಿಸಲು ಸ್ಥಳಕ್ಕೆ ಬಂದ ಸಂದರ್ಭ ಯಾರೋ ಕಿಡಿಗೇಡಿಗಳು ಕೊಳವೆ ಬಾವಿಗೆ ಕಲ್ಲುಗಳನ್ನು ತುಂಬಿ ಮೋಟಾರ್ ಇಳಿಸದಂತೆ ಮಾಡಿರುವದು ಗೋಚರಿಸಿದೆ. ಇದರಿಂದ ಈ ಭಾಗದಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಬದಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಕಲ್ಲುಗಳನ್ನು ತುಂಬಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಮುಂದಾಗಿದೆ.