ಪೊನ್ನಂಪೇಟೆ, ಅ. 9: ನಿಸರ್ಗದ ಜಲ ಸೌಂಧರ್ಯ ಎಂದೇ ಬಣ್ಣಿಸಲಾಗುವ ಜಲಪಾತಗಳು ಕೊಡಗಿನ ಹಲವೆಡೆಗಳಲ್ಲಿ ತನ್ನ ಪಾಡಿಗೆ ಹಾಲ್ನೊರೆಯಂತೆ ಧುಮ್ಮುಕ್ಕಿ ಹರಿಯುತ್ತವೆ. ಈ ಪೈಕಿ ಬಹುತೇಕ ಜಲಪಾತಗಳು ಕಾನನದಲ್ಲಿ ಅಜ್ಞಾತವಾಗಿಯೇ ಹರಿದು ಹೊಳೆ ಸೇರುತ್ತವೆ. ಇದರಿಂದ ಕೊಡಗಿನ ಹೆಚ್ಚು ಜಲಪಾತಗಳು ಪ್ರಕೃತಿ ಪ್ರಿಯರ ಗಮನ ಸೆಳೆಯುವದೇ ಇಲ್ಲ. ಹಾಗೆ ವೀರಾಜಪೇಟೆ ಸಮೀಪದ ಅಂಬಟ್ಟಿಯಲ್ಲಿರುವ ‘ಅಬ್ಬಿಮೂಲೆ ಜಲಪಾತ’ ಕಾನನದ ಅಜ್ಞಾತವಾಸಿಯಾಗಿ ಯಾರಿಗೂ ತಿಳಿಯದಂತೆ ಮೇಲಿಂದಿಳಿದು ಧರೆಯಲ್ಲಿ ಹರಿಯುತ್ತಿದೆ.

ಕೊಡಗಿನಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಎಲ್ಲ ಜಲಪಾತಗಳು ಚೇತರಿಸಿಕೊಳ್ಳುತ್ತವೆ. ಆದರೆ ಮಳೆಗಾಲ ಕೊನೆಯಾಗುವ ಸೆಪ್ಟಂಬರ್- ಅಕ್ಟೋಬರ್ ತಿಂಗಳಿನಲ್ಲಿ ಬಹುತೇಕ ಜಲಪಾತಗಳು ನೀರಿನ ಕೊರತೆಯಿಂದಾಗಿ ತನ್ನ ಹಾಲ್ನೊರೆ ಬಣ್ಣದ ಜಲಧಾರೆಯ ಸೌಂದÀರ್ಯವನ್ನು ಕಡಿಮೆಯಾಗಿಸುತ್ತಾ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ತಿಂಗಳಿನಲ್ಲಿ ತನ್ನ ದರ್ಶನವನ್ನು ಸ್ಥಗಿತಗೊಳಿಸುತ್ತದೆ. ಆದರೆ ಅಂಬಟ್ಟಿಯ ಅಬ್ಬಿಮೂಲೆ ಜಲಪಾತ ಬೇಸಿಗೆ ಕಾಲ ಆರಂಭವಾಗುವ ಫೆಬ್ರವರಿ-ಮಾರ್ಚ್ ತಿಂಗಳವರೆಗೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿರುತ್ತದೆ ಎಂಬುದು ಹೆಚ್ಚು ವಿಶೇಷವಾಗಿದೆ.

ಅಬ್ಬಿಮೂಲೆ ಜಲಪಾತದ ಬಗ್ಗೆ ಸ್ಥಳೀಯ ಮತ್ತು ಸುತ್ತಲಿನ ಗ್ರಾಮಸ್ಥರನ್ನು ಹೊರತುಪಡಿಸಿದರೆ ಬೇರೆ ನಾಗರಿಕ ಪ್ರಪಂಚಕ್ಕೆ ಅಷ್ಟಾಗಿ ತಿಳಿದಿಲ್ಲ. ಈ ಜಲಪಾತಕ್ಕೆ ತೆರಳುವ ಮಾರ್ಗ ತೀರಾ ಕಡಿದಾದ ಕಾರಣ ಜನಸಾಮಾನ್ಯರು ಇದರ ಸೊಬಗನ್ನು ಸವಿಯಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಕೆಲ ಯುವಕರು ಸಾಹಸಮಯವಾಗಿ ಈ ಜಲಪಾತದ ಬಳಿ ಅಪರೂಪಕ್ಕೆ ಸುಳಿಯುವದು ಬಿಟ್ಟರೆ ಉಳಿದವರ ಆಗಮನ ಅಷ್ಟಕಷ್ಟೆ. ಆದರೆ ನಿಸರ್ಗದ ಮಡಿಲಿನಿಂದ ಧುಮ್ಮುಕ್ಕಿ ಹರಿಯುವ ಈ ಜಲಪಾತದ ನಯನ ಮನೋಹರ ದೃಶ್ಯ ಕೊಡಗಿನ ಇತರ ಕೆಲ ಪ್ರಸಿದ್ಧ ಜಲಪಾತಗಳ ಸೊಬಗಿಗಿಂತೇನು ಕಡಿಮೆಯಿಲ್ಲ ಎನ್ನಬಹುದು.

ಬಿಟ್ಟಂಗಾಲ-ಮಗ್ಗುಲ ಗ್ರಾಮದ ಸಂಪರ್ಕ ರಸ್ತೆಯಲ್ಲಿರುವ ಅಂಬಟ್ಟಿಯ ಅಬ್ಬಿಮೂಲೆ ಎಂಬಲ್ಲಿ ಈ ಜಲಪಾತ ಹರಿಯುತ್ತಿರುವದರಿಂದ ಸಹಜವಾಗಿಯೇ ಇದಕ್ಕೆ ‘ಅಬ್ಬಿಮೂಲೆ ಜಲಪಾತ’ ಎಂದು ನಾಮಾಂಕಿತವಾಗಿದೆ. ಬಿಟ್ಟಂಗಾಲದಿಂದ ಮಗ್ಗುಲಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಲ್ಲದ್ದರಿಂದ ಈ ಜಲಪಾತ ಹೆಚ್ಚು ಪ್ರಚಾರಕ್ಕೆ ಬಂದಿಲ್ಲ ಎನ್ನಲಾಗಿದೆ. ಗ್ರಾಮದವರ ಖಾಸಗಿ ಜಾಗದಲ್ಲಿ ಹರಿಯುತ್ತಿರುವ ಅಬ್ಬಿಮೂಲೆ ಜಲಪಾತಕ್ಕೆ ಶತಮಾನಗಳ ಇತಿಹಾಸವಿದೆ. ಗ್ರಾಮದ ಹಿರಿ ತಲೆಮಾರಿನ ಕೆಲವರ ಪ್ರಕಾರ ಅವರ ಅಜ್ಜಂದಿರ ಕಾಲದಲ್ಲೆ ಇಲ್ಲಿ ಜಲಪಾತ ಹರಿಯುತ್ತಿದೆ. ಕಳೆದ 30-40 ವರ್ಷಗಳ ಹಿಂದೆಯೂ ವರ್ಷವಿಡೀ ಜಲಪಾತ ಹರಿದ ದೃಶ್ಯವನ್ನು ತಾವೇ ಸ್ವತಃ ನೋಡಿರುವದಾಗಿ ಅವರು ಹೇಳುತ್ತಾರೆ. ಪ್ರಸಕ್ತ ವರ್ಷದಲ್ಲಿ ಈ ಪ್ರದೇಶದಲ್ಲಿ ಭಾರೀ ಮಳೆಯಾದ ಕಾರಣ ಜಲಪಾತದ ಹರಿವು ಕಳೆದ ಎಲ್ಲಾ ವರ್ಷಗಳಿಗಿಂತ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.