ಮಡಿಕೇರಿ, ಅ. 7: ಒಂದೆಡೆ ಅನಾರೋಗ್ಯಕ್ಕೀಡಾಗಿರುವ ತಾಯಿ.., ಮತ್ತೊಂದೆಡೆ ಅಸೌಖ್ಯದಿಂದ ದಿನ ದೂಡುತ್ತಿರುವ ಪತಿ.., ಇವರಿಬ್ಬರನ್ನು ಆರೈಕೆ ಮಾಡುತ್ತಾ ಬಡತನದ ನಡುವೆ ಬಳಲುತ್ತಿರುವ ಮಹಿಳೆ.
ಕಾಟಕೇರಿ ವಾಟೆಕೊಲ್ಲಿಯ ಲೈನ್ಮನೆಯೊಂದರಲ್ಲಿ ವಾಸವಿದ್ದ ಆನಂದ ಎಂಬವರ ಬಡ ಕುಟುಂಬದ ಕಣ್ಣೀರ ಕಥೆಯಿದು. ಪ್ರಾಕೃತಿಕ ವಿಕೋಪದ ಸಂದರ್ಭ ಈ ಕುಟುಂಬ ಕಾಟಕೇರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆದಿತ್ತು. ಆದರೆ ದಿಢೀರನೆ ಆನಂದ ಅವರಿಗೆ ಜ್ವರ ಕಾಣಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾದರು. ಇದಾದ ಕೆಲವೆ ದಿನಗಳಲ್ಲಿ ಆನಂದ ಅವರ ಅತ್ತೆ ರಾಧಾ ಎಂಬವರಿಗೂ ಅಸ್ತಮಾ ಕಾಯಿಲೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪತಿ ಹಾಗೂ ತಾಯಿ ಇಬ್ಬರೂ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ರಾಧಾ ಅವರ ಪುತ್ರಿ ಸುನಿತಾ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸುನಿತಾ ಹಾಗೂ ಆನಂದ ದಂಪತಿ ಕೂಲಿ ಕಾರ್ಮಿಕರಾಗಿದ್ದು, ಕಾಟಕೇರಿ ವಾಟೆಕೊಲ್ಲಿಯ ತೋಟವೊಂದರಲ್ಲಿ ಕೆಲಸ ಮಾಡುತ್ತಾ ಲೈನ್ಮನೆಯಲ್ಲಿ ವಾಸವಿದ್ದರು. ಈ ನಡುವೆ ಜನವರಿ ತಿಂಗಳಿನಲ್ಲಿ ಆನಂದ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಈ ಸಂದರ್ಭ ಸುನಿತಾ ತೋಟದ ಮಾಲೀಕರಿಂದ ಸಾವಿರಾರು ರೂ. ಸಾಲ ಪಡೆದಿದ್ದರು. ಇದೀಗ ತಾಯಿ ಹಾಗೂ ಪತಿ ಇಬ್ಬರೂ ಆಸ್ಪತ್ರೆಯಲ್ಲಿದ್ದು, ತಾಯಿ ರಾಧಾ ಅವರು ಏಳೆಂಟು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆಗೊಳಗಾಗಿದ್ದರು. ಪ್ರಸ್ತುತ ಆಸ್ಪತ್ರೆಯಲ್ಲಿ ಇದ್ದಾರೆ.
ಆದರೆ, ಆಸ್ಪತ್ರೆ ಖರ್ಚಿಗೆ ಸುನಿತಾ ಬಳಿ ಹಣವಿಲ್ಲ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡ ಸುನಿತಾ, ‘ನಾವು ಕೂಲಿ ಕಾರ್ಮಿಕರಾಗಿದ್ದು, ಪತಿಯ ಚಿಕಿತ್ಸೆಗಾಗಿ ಮಾಡಿದ ಸಾಲವೇ ನನ್ನಿಂದ ತೀರಿಸಲಾಗುತ್ತಿಲ್ಲ. ಇದೀಗ ಪತಿ ಕೊಂಚ ಚೇತರಿಸಿಕೊಳ್ಳುತ್ತಿದ್ದು, ತಾಯಿಯ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಚಿಕಿತ್ಸೆ ವೆಚ್ಚ ಭರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಹೃದಯರ, ಸಂಘ-ಸಂಸ್ಥೆಗಳ ನೆರವಿಗಾಗಿ ಮನವಿ ಮಾಡಿದ್ದಾರೆ.
ಈ ಕುಟುಂಬಕ್ಕೆ ಸಹಾಯ ಹಸ್ತ ಚಾಚುವವರು ಸುನಿತಾ ಅವರ 9108185392 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
-ಉಜ್ವಲ್