ಸುಂಟಿಕೊಪ್ಪ, ಅ. 7: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಎಮ್ಮೆಗುಂಡಿ ಕಾನ್‍ಬೈಲ್, ಬೈಚನಹಳ್ಳಿ ಗ್ರಾಮದ ಅಣ್ಣುನಾಯ್ಕ ಎಂಬವರ ಗದ್ದೆಗೆ ಕಾಡಾನೆಗಳ ಹಿಂಡು ಧಾಳಿ ನಡೆಸಿ ಸುಮಾರು 50 ಸಾವಿರ ರೂ ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಅತಿವೃಷ್ಟಿಯಿಂದ ಬೆಳೆ ನಷ್ಟಗೊಂಡಿದ್ದು, ಇದೀಗ ಕಾಡಾನೆಗಳು ನಾಟಿ ಮಾಡಿದ ಗದ್ದೆಗಳಿಗೆ ಧಾಳಿ ಮಾಡಿ ಪೈರುಗಳನ್ನು ತಿಂದು ತುಳಿದು ಧ್ವಂಸಗೊಳಿಸಿ ಬಾಳೆ, ತೆಂಗು ನಷ್ಟಪಡಿಸಿವೆ ಎಂದು ಅಣ್ಣುನಾಯ್ಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಭಯ ಪಡುತ್ತಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.