ಮಡಿಕೇರಿ, ಅ. 7: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿರುವ ಕಾಲೂರು ಹಾಗೂ ದೇವಸ್ತೂರು ಗ್ರಾಮಗಳ ನೂರಾರು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಭಾರತೀಯ ವಿದ್ಯಾಭವನ ಹಾಗೂ ‘ಕೂರ್ಗ್ ಪ್ರಾಜೆಕ್ಟ್’ ಸಂಸ್ಥೆ ಆಶ್ರಯದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಯಿತು. ಊರಿನವರೇ ಆಗಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಗ್ರಾಮಸ್ಥರ ಸಮ್ಮುಖ ಇಂದು ಮೇಲ್ಕಂಡ ಸಂಸ್ಥೆಗಳಿಂದ ಸೌಲಭ್ಯ ಕಲ್ಪಿಸಲಾಯಿತು.

ಕಾಲೂರು ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 78 ಸಿಂಟೆಕ್ಸ್ ಡ್ರಂಗಳೊಂದಿಗೆ 260ಕ್ಕೂ ಅಧಿಕ ಕುಟುಂಬಗಳಿಗೆ ನೀರಿಗೆ ಅನುಕೂಲವಾಗುವಂತೆ ನೆರವು ಒದಗಿಸಲಾಯಿತು. ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಎಸ್. ದೇವಯ್ಯ ಈ ಸಂದರ್ಭ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಗಳ ಏಳಿಗೆಗೆ ಹಲವು ರೀತಿಯ ಯೋಜನೆ ಮುಖಾಂತರ ಅಭಿವೃದ್ಧಿಗೆ ಕೈ ಜೋಡಿಸುವ ಭರವಸೆ ನೀಡಿದರು. ಅಲ್ಲದೆ, ಗ್ರಾಮಸ್ಥರು ತಮ್ಮ ಪೂರ್ವಜರು ಬಾಳಿ ಬದುಕಿರುವ ನೆಲವನ್ನು ತೊರೆಯದೆ ಇಲ್ಲಿಯೇ ಭವಿಷ್ಯದ ಜೀವನ ಕಂಡುಕೊಳ್ಳುವಂತೆ ಕರೆ ನೀಡಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರಾಕೃತಿಕ ವಿಕೋಪ ನಿಭಾಯಿಸುವಲ್ಲಿ ಮತ್ತು ಗ್ರಾಮಸ್ಥರ ಆತ್ಮಸ್ಥೈರ್ಯ ತುಂಬುವಲ್ಲಿ ಅನೇಕರ ಸಹಕಾರ ಮತ್ತು ನೆರವಿಗೆ ಕೃತಜ್ಞತೆಯೊಂದಿಗೆ ಕಷ್ಟಕಾಲದಲ್ಲಿ ದೃತಿಗೆಡೆದಂತೆ ತಿಳಿಹೇಳಿದರು. ಅನೇಕ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿದ್ದ ಗ್ರಾಮಗಳು ಮತ್ತೆ ಹತ್ತಾರು ವರ್ಷ ಹಿಂದೆ ಸಾಗುವಂತಾಗಿದೆ ಎಂದು ಬೇಸಕ ವ್ಯಕ್ತಪಡಿಸಿದರು.

ಹಿರಿಯರಾದ ಡಾ. ಮನೋಹರ್ ಪಾಟ್ಕರ್, ಜಯಲಕ್ಷ್ಮಿ ಪಾಟ್ಕರ್, ಮನುದೇವಯ್ಯ, ಬಾಲಾಜಿ ಕಶ್ಯಪ್, ಮಣವಟ್ಟಿರ ಚಿಣ್ಣಪ್ಪ ಇತರ ಪ್ರಮುಖರಾದ ಪುಲಿಯಂಡ ಜಗದೀಶ್, ರಮೇಶ್ ಹೊಳ್ಳ ಮೊದಲಾದವರು ಹಾಜರಿದ್ದರು. ಸಾಹಿತಿ ನಾಗೇಶ್ ಕಾಲೂರು ಗ್ರಾಮಸ್ಥರ ಪರವಾಗಿ ಸ್ವಾಗತಿಸಿ, ಪರಿಸ್ಥಿತಿ ಬಗ್ಗೆ ಗಮನ ಸೆಳೆದರು.