ಸಿದ್ದಾಪುರ, ಅ. 7 : ಶಬರಿ ಮಲೆಗೆ ಯುವತಿಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ, ಹಾಗೂ ಕೇರಳ ಸರ್ಕಾರ ಹಿಂದುಗಳ ಧಾರ್ಮಿಕ ಭಾವನೆಗಳೊಂದಿಗೆ ಸಂಘರ್ಷ ನಡೆಸುತ್ತಿದೆ ಎಂದು ಆರೋಪಿಸಿ ಸಿದ್ದಾಪುರದಲ್ಲಿ ಅಯ್ಯಪ್ಪ ಸೇವಾ ಸಂಘ ಮತ್ತು ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಹಾಗೂ ಪುರುಷರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಕೇಸರಿ ದ್ವಜವನ್ನಿಡಿದ ಪ್ರತಿಭಟನಾಕಾರರು ಶ್ರೀ ಅಯ್ಯಪ್ಪ ಸ್ವಾಮಿಯ ನಾಮ ಸ್ಮರಿಸುತ್ತಾ , ಶರಣು ಮಂತ್ರದೊಂದಿಗೆ ಸಿದ್ದಾಪುರ ಶ್ರೀ ಅಯ್ಯಪ್ಪ ದೇವಾಲಯದವರೆಗೆ ಸಾಗಿದರು.ಅಯ್ಯಪ್ಪ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್ ಮಾತನಾಡಿ ಭಾರತ ದೇಶದಲ್ಲಿ ಹಿಂದಿನಿಂದಲೂ ಸ್ತ್ರೀಯರನ್ನು ಪೂಜ್ಯ ಭಾವದಿಂದ ಕಾಣಲಾಗುತ್ತಿದೆ. ಇತ್ತೀಚೆಗೆ ಕೆಲವು ವಿಕೃತ ಮನಸ್ಥಿತಿಯ ಮಹಿಳೆಯರಿಂದ ಶಬರಿ ಮಲೆಯ ಪಾವಿತ್ರ್ಯತೆಯನ್ನು ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ. ಸುಮಾರು 800 ವರ್ಷಗಳ ಇತಿಹಾಸದ ಪವಿತ್ರ ಕ್ಷೇತ್ರವಾದ ಶಬರಿ ಮಲೆಯಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದ ಪದ್ಧತಿಗಳನ್ನು ಪ್ರಶ್ನಿಸಿ, ಸ್ತ್ರೀ ಸಮಾನತೆಯ ಹೆಸರಿನಲ್ಲಿ, ಮಹಿಳೆಯರಿಗೆ ಶಬರಿ ಮಲೆಗೆ ಪ್ರವೇಶ ನೀಡಬೇಕೆಂದು ಕೋರ್ಟ್‍ಗೆ ದಾವೆ ಹೂಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅನುಮತಿಯನ್ನು ನೀಡಿ ತೀರ್ಪು ಪ್ರಕಟಿಸಿದೆ. ಆದರೆ ದೇಶದ ಶುದ್ದ ಮನಸ್ಥಿತಿಯ ಶೇ 90ರಷ್ಟು ಮಹಿಳೆಯರು ಶಬರಿ ಮಲೆಯ ಆಚಾರ ಪದ್ದತಿಗೆ ವಿರುದ್ದವಾದ ಅಸಂಪ್ರದಾಯಿಕ ಪದ್ದತಿಯನ್ನು ಒಪ್ಪಿಕೊಳ್ಳದೇ, ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ ಎಂದರು.
ಶಿಕ್ಷಕಿ ಬಿಂದು ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಿಂದ ನಮ್ಮೆಲ್ಲರ ಮನಸ್ಸಿಗೂ ನೋವಾಗಿದ್ದು, ನಮ್ಮ ಸಂಪ್ರದಾಯದ ಮೇಲೆ ಪೆಟ್ಟು ಬೀಳುವಂತಹ ವಿಚಾರವಾಗಿದೆ. ಶಬರಿ ಮಲೆಗೆ ತೆರಳಲು 41 ದಿನಗಳ ಕಾಲ ಕಠಿಣ ವ್ರತವನ್ನು ಆಚರಿಸಿ ತೆರಳಬೇಕಾಗಿದೆ, ಆದ್ದರಿಂದಲೇ
(ಮೊದಲ ಪುಟದಿಂದ) ಶಬರಿಮಲೆಗೆ 10 ರಿಂದ 50 ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಈ ವಯಸ್ಸಿನ ಯಾವ ಮಹಿಳೆಯರಿಗೂ ಕೂಡ ವ್ರತವನ್ನು ಆಚರಿಸಲು ಸಾದ್ಯವಾಗುವದಿಲ್ಲ. ಆದರಿಂದ ಮಹಿಳೆ ಯರಿಗೆ ಪ್ರವೇಶವನ್ನು ನಿರಾಕರಿಸ ಲಾಗಿದೆ. ನಮ್ಮ ಧರ್ಮ, ಸಂಸ್ಕøತಿ ಯನ್ನು ಆಚರಿಸಿ ಉಳಿಸಿಕೊಂಡು ಹೋಗುವದು ನಮ್ಮ ಕರ್ತವ್ಯವಾಗಿದೆ. ಸಂಪ್ರದಾಯಸ್ಥ ಮಹಿಳೆಯರು ಯಾರೂ ಕೂಡ ಶಬರಿ ಮಲೆಗೆ ಪ್ರವೇಶಿಸುವದಿಲ್ಲ ಎಂದು ಹೇಳಿದರು.
ತಾ.ಪಂ ಸದಸ್ಯ ಬಲ್ಲರಂಡ ಮಣಿ ಉತ್ತಪ್ಪ ಹಾಗೂ ಹಿಂದೂ ಮುಖಂಡ ಮೋಹನ್ ಮಾತನಾಡಿ ದರು. ಈ ಸಂದರ್ಭ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದ ಮನವಿ ಪತ್ರವನ್ನು ಪೊಲೀಸ್ ವೃತ್ತ ನಿರೀಕ್ಷಕ ಮೇದಪ್ಪ ಅವರÀ ಮೂಲಕ ಸರ್ಕಾರಕ್ಕೆ ನೀಡಲಾಯಿತು. ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಗಳಾದ ಪ್ರವೀಣ್, ಶರಣ್, ಪ್ರಜೀತ್,ರಾಜ, ಷಾಜಿ,ಪದ್ಮನಾಭ್ ಸೇರಿದಂತೆ ಇತರರಿದ್ದರು. ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.