ಶ್ರೀಮಂಗಲ, ಅ. 7: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಖಾಂತರ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸ್ಥಳದಲ್ಲಿ 150 ಮೆಟ್ರಿಕ್ ಟನ್ ಸಾಮಥ್ರ್ಯದ 17 ಲಕ್ಷ ರೂ. ವೆಚ್ಚದ ಗೋದಾಮು ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಂಸದ ಪ್ರತಾಪ್ ಸಿಂಹ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಾಳೆಲೆ, ಕಾನೂರು ಭಾಗದ ಸದಸ್ಯ ಮಾಚಂಗಡ ಸುಜಾ ಪೂಣಚ್ಚ ಹಾಗೂ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮುಂದಾಳತ್ವದಿಂದ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ನೂತನ ಗೋದಾಮು ನಿರ್ಮಾಣಕ್ಕೆ ಅನುವು ಮಾಡಲಾಗಿದೆ.

ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಸಂಸದ ಹಾಗೂ ಶಾಸಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಈ ಭಾಗದ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಗೋದಾಮು ನಿರ್ಮಾಣ ಮಾಡಲಾಗಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಉಪಾಧ್ಯಕ್ಷ ಕೆ.ಪಿ. ನಂಜಪ್ಪ, ನಿರ್ದೇಶಕರುಗಳಾದ ಕೆ.ಜಿ. ಸದಾಶಿವ, ಎಂ.ಎನ್. ಸತೀಶ್, ಕೆ.ಆರ್. ಸುರೇಶ್, ಕೆ.ಎಸ್. ಬೋಪಣ್ಣ, ಸಿ.ಬಿ. ಬೆಳ್ಯಪ್ಪ, ಹೆಚ್.ಕೆ. ಬುಗ್ಗು, ರೇಖಾ ಬೋಪಣ್ಣ, ಎಂ.ಎನ್. ಅಶ್ವಿನಿ ನಂದಾ, ಲೀನಾ ಬೋಪಣ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.