ಮಡಿಕೇರಿ, ಅ. 7: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮವು ವೀರಾಜಪೇಟೆ ಕಾವೇರಿ ಆಶ್ರಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಬೇಲೂರು ಮಠದ ಸ್ವಾಮಿ ಲೋಕನಾಥಾನಂದಜೀ ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಇಡೀ ಭಾರತದಲ್ಲಿ ಸಂಚಲನ ಮೂಡಿಸಿ ಸ್ವಾಭಿಮಾನವನ್ನು ದೊರಕಿಸಿ ಕೊಟ್ಟಿತು ಎಂದು ಹೇಳಿದರು.
1893ರಲ್ಲಿ ನಡೆದ ಚಿಕಾಗೋ ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಎಲ್ಲಾ ಧರ್ಮಗಳು ಒಂದೇ ಹಾಗೂ ಶ್ರೇಷ್ಠ ಎಂದು ಸಾರುವಲ್ಲಿ ವಿವೇಕಾನಂದರು ಸಫಲರಾದರು. ಸಮ್ಮೇಳನದಿಂದ ಸ್ವಾಮಿ ಅವರಿಗೆ ಖ್ಯಾತಿ ಏನೋ ಬಂತು, ಆದರೆ ಅದನ್ನು ಗಿಟ್ಟಿಸುವಲ್ಲಿ ಅವರು ಪಟ್ಟ ಕಷ್ಟಗಳನ್ನು ನಾವೆಲ್ಲರೂ ಗಮನಿಸಬೇಕು ಎಂದು ಹೇಳಿದರು. ಭಾರತಕ್ಕೆ ಮರಳಿದ ನಂತರ ತಮ್ಮ ಆದರ್ಶಗಳನ್ನೊಳಗೊಂಡ ಸಂಘವೊಂದನ್ನು ಶ್ರೀ ರಾಮಕೃಷ್ಣ ಮಿಷನ್ನ ರೂಪದಲ್ಲಿ 1897ರಲ್ಲಿ ಸ್ಥಾಪಿಸಿದರು. ಇಂದು ಸುಮಾರು 200 ಶಾಖೆಗಳಲ್ಲಿ ವಿಶ್ವದಾದ್ಯಂತ ಮಿಷನ್ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸ್ವಾಮಿ ವಿವೇಕಾನಂದರ ಆದರ್ಶವನ್ನು ಸಮಾಜದಲ್ಲಿ ಯುವಕ-ಯುವತಿಯರು ಪಾಲನೆ ಮಾಡಬೇಕು ಎಂದು ಕರೆಕೊಟ್ಟರು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಜೀ ಅವರು ಮಾತನಾಡಿ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿಯ ಭಾಷಣಗಳ ಬಗ್ಗೆ ಪ್ರಸ್ತಾಪಿಸಿ, ಅಮೇರಿಕಕ್ಕೆ ಹೋದ ಸ್ವಾಮೀಜಿ ಅವರಿಗೆ ಬಂದ ತೊಂದರೆಗಳು, ನಂತರ ದೊರೆತ ಸನ್ಮಾನಗಳ ಬಗ್ಗೆ ವಿವರಿಸಿದರು.
ಶಾರದಾಶ್ರಮದ ಇನ್ನೋರ್ವ ಸ್ವಾಮಿ ಗೀತಸಾರಾನಂದಜೀಯವರು ಮಾತನಾಡಿ ವಿವೇಕಾನಂದರ ಭಾಷಣದಿಂದ ಭಾರತಕ್ಕೆ ತನ್ನತನ ದೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪುಷ್ಠಿ ಕೊಟ್ಟಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕಾಶಿಯಲ್ಲಿ ಖಾಯಂ ಆಗಿ ನೆಲೆಸಲು ನಿರ್ಧರಿಸಿರುವ ನಿವೃತ್ತ ಶಿಕ್ಷಕಿ ಹೊಟ್ಟೆಂಗಡ ಸುಂದರಿ ಮೇದಪ್ಪ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾವೇರಿ ಆಶ್ರಮದ ವಿವೇಕಾನಂದ ಸ್ವಾಮಿಜಿ ಸಾನಿಧ್ಯದಲ್ಲಿ ನಡೆಯಿತು.