ಕೂಡಿಗೆ, ಅ. 7: ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯೊಂದಿಗೆ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗಿದ್ದವರಿಗೆ ಸೇರಿದ ಜಾನುವಾರುಗಳ ಸಂರಕ್ಷಣೆ ಮಾಡಲಾಗುತ್ತಿದೆ.
ಇದೀಗ ಕೂಡಿಗೆಯಲ್ಲಿ 119 ಹಸುಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು. ಇದೀಗ ಬೆಟ್ಟಗೇರಿ ಪ್ರದೇಶದ ಸಿ.ಕೆ.ತಿಮ್ಮಯ್ಯ ಎಂಬವವರು ತಮ್ಮ ವಸತಿ ವ್ಯವಸ್ಥೆ ಸರಿಪಡಿಸಿಕೊಂಡು ಈ ಕೇಂದ್ರದಿಂದ ಅವರಿಗೆ ಸೇರಿದ ಏಳು ಹಸುಗಳನ್ನು ಮರಳಿ ಕರೆದುಕೊಂಡು ಹೋಗಿದ್ದಾರೆ. ಇದುವರೆಗೆ ತಮ್ಮ ಹಸುಗಳನ್ನು ಪಾಲನೆ ಮಾಡಿದ್ದಕ್ಕೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜರ್ಸಿ ತಳಿ ಸಂವರ್ಧನಾ ಕೇಂದ್ರದ ನಿರ್ದೇಶಕ ಚಿಟಿಯಪ್ಪ, ರಾಜ್ಯ ವಲಯ ಜಂಟಿ ನಿರ್ದೇಶಕ ಡಾ. ದೇವದಾಸ್, ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮತ್ತು ಮೂರು ತಾಲೂಕಿನ ಸಹಾಯಕ ನಿರ್ದೇಶಕರು, ಕೇಂದ್ರದ ತಾಂತ್ರಿಕ ಸಿಬ್ಬಂದಿಗಳಾದ ದಿವ್ಯ, ನಂದಕುಮಾರ್ ಈ ಸಂದರ್ಭ ಇದ್ದರು.